ಮಂಗಳೂರು ಕೇಂದ್ರ ಮೈದಾನದಲ್ಲಿ ಕುಡ್ಲದ ಪಿಲಿಪರ್ಬ-2026ಕ್ಕೆ ವಿದ್ಯುಕ್ತ ಚಾಲನೆ ; 11 ಹುಲಿವೇಷ ತಂಡಗಳಿಂದ ಸ್ಪರ್ಧೆ; ತುಳುನಾಡಿನ ಸಾಂಪ್ರದಾಯಿಕ ಕಲೆಯ ಅನಾವರಣಕ್ಕೆ ವೇದಿಕೆ

ಮಂಗಳೂರು, ಅ. 18: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿರುವ ಕುಡ್ಲದ ಪಿಲಿಪರ್ಬ-2026 ಸೀಸನ್ 5ಕ್ಕೆ ಭಾನುವಾರ ವಿದ್ಯುಕ್ತ ಚಾಲನೆ ದೊರೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ಗಣಹೋಮದ ಬಳಿಕ ಹಲವು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪಿಲಿಪರ್ಬವು ತುಳುನಾಡಿನ ಗತವೈಭವದ ಘನ ಪರಂಪರೆಯನ್ನು ಸ್ಮರಿಸುವುದರ ಜತೆಗೆ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಹೇಳಿದರು.

ತುಳುನಾಡಿನ ಸಾಂಪ್ರದಾಯಿಕ ಕಲೆಯಾಗಿರುವ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ರೂಪ ದೊರೆತಿರುವುದು ವಿಶೇಷ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ 11 ಹುಲಿವೇಷ ತಂಡಗಳಿಗೂ ಅವರು ಶುಭ ಹಾರೈಸಿದರು. ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಪ್ರೇಕ್ಷಕರನ್ನು ಸ್ವಾಗತಿಸಿದರು.

ಪಿಲಿಪರ್ಬದ ಸ್ಪರ್ಧಾಕೂಟವು ಭಾನುವಾರ ರಾತ್ರಿಯವರೆಗೂ ಅದ್ದೂರಿಯಾಗಿ ನಡೆಯಲಿದ್ದು, ಅಂತಿಮವಾಗಿ ವಿಜೇತ ತಂಡವನ್ನು ಘೋಷಿಸಲಾಗುತ್ತದೆ. ಕಾರ್ಯಕ್ರಮವನ್ನು ವೀಕ್ಷಿಸಲು ಸಾಧ್ಯವಾಗದವರಿಗಾಗಿ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ನರೇಶ್ ಪ್ರಭು ಹಾಗೂ ಸಹಾನ್ ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ನಿಕಟಪೂರ್ವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಹಲವು ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

Previous Post Next Post