ಕ್ರೀಡಾ ಕ್ಷೇತ್ರದ ಸಾಧಕಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾದ ಎಂ.ಆರ್. ಪೂವಮ್ಮ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ರಾಜ್ಯಮಟ್ಟದ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ 2026-27’ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಕ್ಷೇತ್ರದ ಸಾಧಕಿ ಏಷ್ಯನ್ ಗೇಮ್ಸ್ ಬಂಗಾರ ಪದಕ ವಿಜೇತೆ ಎಂ.ಆರ್. ಪೂವಮ್ಮ ಆಯ್ಕೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸುದೀರ್ಘ ಸೇವೆ, ಅಮೂಲ್ಯ ಕೊಡುಗೆ ಹಾಗೂ ಗಣನೀಯ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 30ರ ಶುಕ್ರವಾರ ಸಂಜೆ 7.30ಕ್ಕೆ ಮಂಗಳೂರಿನ ಹೊಟೇಲ್ ಸೀ ವ್ಯೂವ್‌ನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಾಜಿ ಒಲಿಂಪಿಕ್ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಪದ್ಮಶ್ರೀ ಪುರಸ್ಕೃತರಾದ  ವಂದನಾ ಶಾನುಭಾಗ್ (ಪೈ ಮಾರೂರು) ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೋ. ಬಿ.ಎನ್. ರವೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಜಿಲ್ಲಾ 3181ರ ಸಹಾಯಕ ಗವರ್ನರ್ ರೋ. ಪ್ರವೀಣ್ ಚಂದ್ರ ಶರ್ಮಾ ಹಾಗೂ ವಲಯ ಸೇನಾನಿ ರೋ. ರಾಜೇಶ್ ಶೆಟ್ಟಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿಪರ ಸೇವೆ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ರೋಟರಿ ಮತ್ತು ರೋಟರ್ಯಾಕ್ಟ್ ಸಂಸ್ಥೆಗಳು ಪ್ರತಿವರ್ಷ ಈ ಪ್ರಶಸ್ತಿ ನೀಡಿ ಗೌರವಿಸುತ್ತವೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ರೋ. ಡಾ. ದೇವದಾಸ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

Previous Post Next Post