ಮೈಸೂರು : ಕಂಬಳವು ಕೇವಲ ಕ್ರೀಡೆಯಲ್ಲ, ಅದು ಕರಾವಳಿಯ ಕೃಷಿ ಸಂಸ್ಕೃತಿ, ರೈತರ ಶ್ರಮ ಮತ್ತು ಪರಂಪರೆಯ ಪ್ರತೀಕವಾಗಿದೆ. ಭಕ್ತಿಯ ಬೇರು, ಕೃಷಿಯ ತಳಹದಿ ಹಾಗೂ ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಂಬಳ ಸ್ಪರ್ಧೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ಜನರ ಸಾಂಸ್ಕೃತಿಕ ಹಬ್ಬವಾಗಿದ್ದು, ಕೃಷಿ ಮಣ್ಣಿನಲ್ಲಿ ಹುಟ್ಟಿದ ವಿಶಿಷ್ಟ ಕ್ರೀಡೆಯಾಗಿದೆ ಎಂದರು.
ತಾಯಿ ಚಾಮುಂಡೇಶ್ವರಿಯ ಹಬ್ಬವಾದ ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳವನ್ನು ಪರಿಚಯಿಸುವ ಮೂಲಕ ನಾಡಿನ ವೈವಿಧ್ಯಮಯ ಸಂಸ್ಕೃತಿಗೆ ಗೌರವ ಸಲ್ಲಿಸಲಾಗುತ್ತಿದೆ. ಸುಮಾರು 800 ವರ್ಷಗಳ ಹಿಂದೆ ರೈತರ ಬದುಕು ಮತ್ತು ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡು ಕಂಬಳ ಆರಂಭವಾಯಿತು. ಭತ್ತದ ಗದ್ದೆ, ಮಳೆ, ಮಣ್ಣು, ಕೋಣಗಳು ಹಾಗೂ ರೈತರ ಬದುಕಿನ ಪ್ರತಿಬಿಂಬವನ್ನು ಕಂಬಳದಲ್ಲಿ ಕಾಣಬಹುದು ಎಂದು ಹೇಳಿದರು.
ಕೃಷಿ ಶ್ರಮಿಕರನ್ನು ಗೌರವಿಸುವುದು ಹಾಗೂ ನಾಡಿನ ಕ್ರೀಡೆ ಮತ್ತು ಕಲೆಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ಪ್ರಯತ್ನದ ಬಗ್ಗೆ ಟೀಕೆಗಳು ಬಂದರೂ, ಟೀಕೆಗಳು ಮರೆಯಾಗುತ್ತವೆ; ಕೆಲಸಗಳು ಉಳಿಯುತ್ತವೆ. ರಾಜ್ಯದ ಎಲ್ಲ ಭಾಗಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ದಸರಾ ಉತ್ಸವದ ಭಾಗವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಒಂದೇ ನಾಡು, ಹಲವು ಸಂಸ್ಕೃತಿ : ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಲು ಕರಾವಳಿಯಿಂದ ಸುಮಾರು 3,000 ಮಂದಿ ಮೈಸೂರಿಗೆ ಆಗಮಿಸಿರುವುದನ್ನು ಉಲ್ಲೇಖಿಸಿದ ಸಿಎಂ, ಎಲ್ಲರಿಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. ವಿಜಯನಗರದ ಅರಸರು ಕೂಡ ಕರಾವಳಿಯ ಕೋಣಗಳಿಗೆ ಗೌರವ ಸಲ್ಲಿಸುತ್ತಿದ್ದರು ಎಂಬ ಇತಿಹಾಸವಿದ್ದು, ಈ ಕುರಿತು ಪುಸ್ತಕವೊಂದನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದ 23 ಕಂಬಳ ಕೂಟಗಳಿಗೆ ಸರ್ಕಾರ ತಲಾ ಐದು ಲಕ್ಷ ರೂಪಾಯಿ ನೆರವು ನೀಡುತ್ತಿದೆ. ಕರಾವಳಿಯಿಂದ ಮೈಸೂರು ಹಾಗೂ ಕಲ್ಯಾಣ ಕರ್ನಾಟಕದವರೆಗೆ “ಒಂದೇ ನಾಡು, ಹಲವು ಸಂಸ್ಕೃತಿ; ಒಂದೇ ಕನ್ನಡತನ, ಅದುವೇ ಅಖಂಡ ಕರ್ನಾಟಕ” ಎಂಬ ಸಂದೇಶವನ್ನು ಸಾರುವುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.
ದಸರಾ ಕುರಿತು ರೀಲ್ಸ್ ಮಾಡಿ; 100 ಮಂದಿಗೆ ಪ್ರಶಸ್ತಿ : ಮೈಸೂರು ದಸರಾ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರು ರೀಲ್ಸ್ ತಯಾರಿಸಿ @mysoredasara.2026 ಪುಟಕ್ಕೆ ಟ್ಯಾಗ್ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದರು. ದೀಪಾಲಂಕಾರ, ಜಂಬೂಸವಾರಿ, ಕ್ರೀಡೆ ಸೇರಿದಂತೆ ದಸರಾದ ಯಾವುದೇ ಕಾರ್ಯಕ್ರಮದ ಕುರಿತು ರೀಲ್ಸ್ ಮಾಡಬಹುದು. ಅತ್ಯುತ್ತಮ 100 ರೀಲ್ಸ್ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದರು.
ಕಂಬಳದ ಆಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಗೌರವಿಸಬೇಕು. ನಾಡಿನ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ದಸರಾ ಉತ್ಸವದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ, ಗಾಯನ, ನೃತ್ಯ, ಆಹಾರ ಮೇಳ ಹಾಗೂ ವೈಮಾನಿಕ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ರಾಜ್ಯದ ಹಲವು ಜನಪದ ಕಲೆಗಳಿಗೂ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಂಬಳ ಓಟಗಾರರಿಂದ ಅಥ್ಲೆಟಿಕ್ಸ್ನಲ್ಲೂ ಸಾಧನೆ ಸಾಧ್ಯ : ಕಂಬಳ ಓಟಗಾರರ ವೇಗದ ಕುರಿತು ಮಾತನಾಡಿದ ಸಿಎಂ, ಕಂಬಳದಲ್ಲಿ ಓಟಗಾರರು ತೋರಿಸುವ ವೇಗ ಮತ್ತು ಸಾಮರ್ಥ್ಯಕ್ಕೆ ಸೂಕ್ತ ತರಬೇತಿ ನೀಡಿದರೆ ಅಥ್ಲೆಟಿಕ್ಸ್ನಲ್ಲಿಯೂ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಂಬಳವು ಕರಾವಳಿಯ ಸಾಂಸ್ಕೃತಿಕ ಹಬ್ಬ ಮಾತ್ರವಲ್ಲದೆ, ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಲು ಸಹ ನೆರವಾಗಬಹುದು. ನಾಡಿನ ವಿವಿಧ ಭಾಗಗಳ ಪರಂಪರೆಯನ್ನು ಜನರಿಗೆ ಪರಿಚಯಿಸುವುದು ಸರ್ಕಾರದ ಕರ್ತವ್ಯವಾಗಿದೆ. ಲಕ್ಷಾಂತರ ಜನರು ದಸರಾ ವೀಕ್ಷಿಸುತ್ತಿದ್ದು, ತಾಯಿ ಚಾಮುಂಡೇಶ್ವರಿಯ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ಮೈಸೂರು ಕಂಬಳದ ರೂವಾರಿ ಶಾಸಕ ಪುತ್ತೂರು ಅಶೋಕ್ ಕುಮಾರ್ ರೈ, ಕಂಬಳ ಸಮಿತಿಯ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಯತೀಂದ್ರ ಸಿದ್ಧರಾಮಯ್ಯ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.
Post a Comment