ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ 250 ನೂತನ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ; ವೈದ್ಯಕೀಯ ವೃತ್ತಿಯಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ. ಯು.ಕೆ. ಮೋನು


ಮಂಗಳೂರು: ವೈದ್ಯಕೀಯ ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವ ಪಯಣವಲ್ಲ; ಸಮಾಜಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿಯುತ ವೃತ್ತಿಜೀವನದ ಆರಂಭ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಣಚೂರು ಇಸ್ಲಾಮಿಕ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಕರೆ ನೀಡಿದರು.

ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಅ.7ರಂದು 2026ರ ಪ್ರಥಮ ಸಾಲಿನ 250 ನೂತನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಓರಿಯೆಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ವೈಯಕ್ತಿಕ ಭದ್ರತೆ ಮತ್ತು ಸರ್ವತೋಮುಖ ಅಭಿವೃದ್ಧಿಗೂ ಸಂಸ್ಥೆ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದರು.

ನೂತನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಶೈಕ್ಷಣಿಕ ಪಯಣ, ಕಾಲೇಜಿನ ಶೈಕ್ಷಣಿಕ ವಾತಾವರಣ, ನಿಯಮಾವಳಿಗಳು, ಮೂಲಸೌಕರ್ಯ ಹಾಗೂ ವಿವಿಧ ಸೌಲಭ್ಯಗಳ ಕುರಿತು ಕಾರ್ಯಕ್ರಮದಲ್ಲಿ ಸಮಗ್ರ ಮಾಹಿತಿ ನೀಡಲಾಯಿತು.

ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ, ಕಾಲೇಜಿನ ಮೂಲಸೌಕರ್ಯ, ಶಿಸ್ತು, ಹಾಸ್ಟೆಲ್ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರು ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಡೀನ್ ಡಾ. ಶಹನವಾಜ್ ಮಣಿಪಾಡಿ ಮಾತನಾಡಿ, ಕಾಲೇಜು ಆವರಣದಲ್ಲಿ ರ್‍ಯಾಗಿಂಗ್, ಗುಂಪು ಘರ್ಷಣೆ, ಮಾದಕ ವಸ್ತುಗಳ ಸೇವನೆ ಹಾಗೂ ಅಶಿಸ್ತಿನ ವರ್ತನೆಗೆ ಸಂಪೂರ್ಣ ನಿಷೇಧವಿದೆ. ಇಂತಹ ಪ್ರಕರಣಗಳ ವಿರುದ್ಧ ಸಂಸ್ಥೆ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೋನಿಸ್, ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಕೀನಾ ಹಾಗೂ ಇರ್ಫಾನ್ ಕಾರ್ಯಕ್ರಮ ನಿರೂಪಿಸಿದರು. ಅಂಗ ವಿಚ್ಛೇದನ ತಂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರೋಷನ್ ವಂದಿಸಿದರು.

Post a Comment

Previous Post Next Post