ಮಂಗಳೂರು : ಕನ್ನಡದ ಪ್ರಸಿದ್ಧ ಲೇಖಕ, ವಿಮರ್ಶಕ ಹಾಗೂ ಹಿರಿಯ ಚಿಂತಕ ರೆಹಮತ್ ತರೀಕೆರೆ ಅವರು ಈ ಬಾರಿಯ ಜನನುಡಿ–2026 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ಜನನುಡಿ ಉತ್ಸವ ನಡೆಯಲಿದ್ದು, ನವೆಂಬರ್ 27ರ ಶುಕ್ರವಾರ ಸಂಜೆಯಿಂದಲೇ ಪುಸ್ತಕ ಮೇಳ ಆರಂಭವಾಗಲಿದೆ ಎಂದು ಜನನುಡಿ ಬಳಗ ತಿಳಿಸಿದೆ.
ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಬಹುತ್ವದ ಇತಿಹಾಸ ಹಾಗೂ ಸಾಮಾಜಿಕ ಚಿಂತನೆಗಳ ಕುರಿತು ಆಳವಾದ ಅಧ್ಯಯನ ನಡೆಸಿರುವ ರೆಹಮತ್ ತರೀಕೆರೆ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಗುರುತನ್ನು ಗಳಿಸಿದ್ದಾರೆ. ಅವರ ಸಂಶೋಧನಾ ಬರಹಗಳು, ವಿಮರ್ಶಾತ್ಮಕ ದೃಷ್ಟಿಕೋನ ಮತ್ತು ಪ್ರಖರ ವೈಚಾರಿಕ ಚಿಂತನೆಗಳು ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಪ್ರಭಾವ ಬೀರಿವೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಗಳಿಸಿದರು. ಬಳಿಕ ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ಡೀನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಕರ್ನಾಟಕದ ಸೂಫಿ, ನಾಥ, ಶಾಕ್ತ ಹಾಗೂ ಮೊಹರಂ ಸಂಸ್ಕೃತಿಗಳ ಕುರಿತು ಕ್ಷೇತ್ರಕಾರ್ಯ ಮತ್ತು ಸಂಶೋಧನೆ ನಡೆಸಿರುವ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಪ್ರತಿಸಂಸ್ಕೃತಿ’, ‘ಕರ್ನಾಟಕದ ಸೂಫಿಗಳು’, ‘ಅಂಡಮಾನ್ ಕನಸು’, ‘ಕರ್ನಾಟಕ ಶಾಕ್ತಪಂಥ’ ಮತ್ತು ‘ಕತ್ತಿಯಂಚಿನ ದಾರಿ’ ಅವರ ಪ್ರಮುಖ ಕೃತಿಗಳಾಗಿವೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಪ್ರಶಸ್ತಿ ಹಾಗೂ ಗೌರವಗಳಿಗೆ ಪಾತ್ರರಾಗಿರುವ ರೆಹಮತ್ ತರೀಕೆರೆ ಅವರಿಗೆ ‘ಕತ್ತಿಯಂಚಿನ ದಾರಿ’ ವಿಮರ್ಶಾ ಪ್ರಬಂಧಗಳ ಸಂಕಲನಕ್ಕಾಗಿ 2010ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ದೇಶದಲ್ಲಿ ಹೆಚ್ಚುತ್ತಿದ್ದ ಅಸಹಿಷ್ಣುತೆಯನ್ನು ವಿರೋಧಿಸಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.
ಪ್ರಭುತ್ವದೊಂದಿಗೆ ವಿಮರ್ಶಾತ್ಮಕf ಅಂತರ ಕಾಯ್ದುಕೊಂಡು ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ಪ್ರಶ್ನೆಗಳನ್ನು ನಿರಂತರವಾಗಿ ಚರ್ಚಿಸುತ್ತಾ ಬಂದಿರುವ ರೆಹಮತ್ ತರೀಕೆರೆ ಅವರ ಉಪಸ್ಥಿತಿಯು ಜನನುಡಿ–2026ಕ್ಕೆ ವಿಶೇಷ ಮಹತ್ವ ನೀಡಲಿದೆ ಎಂದು ಜನನುಡಿ ಬಳಗ ಆಶಯ ವ್ಯಕ್ತಪಡಿಸಿದೆ.
Post a Comment