Tiranga Yatra | ಮಂಗಳೂರಿನಲ್ಲಿ ಅದ್ದೂರಿ ತಿರಂಗಾ ಯಾತ್ರೆ; ದೇಶಭಕ್ತಿಯ ಘೋಷಣೆ ಮೊಳಗಿಸಿದ ಸಾವಿರಾರು ಜನರು


ಮಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಭಕ್ತರ ವೇದಿಕೆ, ಮಂಗಳೂರು ದಕ್ಷಿಣ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನ ಬಳಿಯ ರಾಜಾಜಿ ಪಾರ್ಕ್‌ನಿಂದ ಗೋವಿಂದ ಪೈ ನವಭಾರತ್ ಸರ್ಕಲ್‌ವರೆಗೆ ಬುಧವಾರ ಬೃಹತ್ ತಿರಂಗಾ ಯಾತ್ರೆ ನಡೆಯಿತು.

ಯಾತ್ರೆಯಲ್ಲಿ ಸಾವಿರಾರು ಮಂದಿ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದು ಸಾಗಿದರು. ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸುತ್ತಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವೆಲ್ಲರೂ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುತ್ತಿದ್ದೇವೆ ಎಂದರು. ತಿರಂಗಾ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದ್ದು, ರಾಷ್ಟ್ರಧ್ವಜದ ಬಗ್ಗೆ ಸದಾ ಗೌರವವನ್ನು ಹೊಂದಿರಬೇಕು ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯುವ ಪೀಳಿಗೆ ತಿರಂಗಾ ಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ರಾಷ್ಟ್ರದ ಉತ್ತಮ ಭವಿಷ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.

ಕಾರ್ಯಕ್ರಮದಲ್ಲಿ ಸತೀಶ್ ಕುಂಪಲ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಪೂರ್ಣಿಮಾ ಎಂ., ಸುಜಿತ್ ಪ್ರತಾಪ್, ಸಂಜಯ್ ಪ್ರಭು, ಸುಧೀರ್ ಶೆಟ್ಟಿ ಕಣ್ಣೂರು, ಮಂಜುಳಾ ರಾವ್, ವಿಕಾಸ್ ಪುತ್ತೂರು, ನಂದನ್ ಮಲ್ಯ, ಅಶ್ವಿತ್ ಕೊಟ್ಟಾರಿ, ಅರುಣ್ ಜಿ. ಶೇಟ್, ಮಹೇಶ್ ಜೋಗಿ, ಋತ್ವಿಕ್ ಕದ್ರಿ, ಸಚಿನ್ ರೈ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮೋನಪ್ಪ ಭಂಡಾರಿ ಸೇರಿದಂತೆ ನಿಕಟಪೂರ್ವ ಪಾಲಿಕೆ ಸದಸ್ಯರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Post a Comment

Previous Post Next Post