ಮಂಗಳೂರು : ಎಂಆರ್‌ಪಿಎಲ್‌ನ 4ನೇ ಹಂತದ ಭೂಸ್ವಾಧೀನದಿಂದ ನಿರ್ವಸಿತರಾದ ಕುಟುಂಬಗಳಿಗೆ 2026ರ ಮೇನಲ್ಲಿ ನಡೆದ ಸಭೆಯ ನಿರ್ಣಯದಂತೆ ಮುಂದಿನ ಮೂರು ತಿಂಗಳೊಳಗೆ ಉದ್ಯೋಗ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ 4ನೇ ಹಂತದ ವಿಸ್ತರಣೆ ನಿಲ್ಲಿಸಿ ಭೂಮಿಯನ್ನು ವಾಪಸ್ ನೀಡಬೇಕು ಎಂದು ನಾಲ್ಕನೇ ಹಂತದ ಎಂಆರ್‌ಪಿಎಲ್ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಆ. 9ರಂದು ಕುತ್ತೆತ್ತೂರಿನಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
2016ರ ಡಿಸೆಂಬರ್‌ನಲ್ಲಿ ಪಂಚಾಯತ್ ತೆರಿಗೆ ಪಾವತಿಸಿದ ದಾಖಲೆ ಹೊಂದಿರುವವರಿಗೆ ಉದ್ಯೋಗ ನೀಡುವ ಕುರಿತು 2024ರ ಜುಲೈನಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಆರ್‌ಆ್ಯಂಡ್‌ಆರ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಏಳು ತಿಂಗಳೊಳಗೆ ಉದ್ಯೋಗ ಕಲ್ಪಿಸಲು ಸೂಚಿಸಲಾಗಿತ್ತು. ಆದರೆ, ಸಮಿತಿಯ ಗಮನಕ್ಕೆ ಬಾರದೆ ಕಂಪನಿ ಅಧಿಕಾರಿಗಳು ಆಧಾರ್, ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸುವಂತೆ ನಿಯಮ ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದರಿಂದ ಸರ್ಕಾರದ ಆದೇಶದಲ್ಲಿ ಏಳು ತಿಂಗಳ ಗಡುವನ್ನು ಕೈಬಿಡಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಡೋನಿ ಸುವಾರಿಸ್ ಆರೋಪಿಸಿದರು.
ಮಾಜಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ತೆರಿಗೆ ದಾಖಲೆ ಹೊಂದಿರುವವರಿಗೆ ಉದ್ಯೋಗ ನೀಡಲು ಎಂಆರ್‌ಪಿಎಲ್ ಒಪ್ಪಿಕೊಂಡಿತ್ತು. ಸಂಸದರು ಹಾಗೂ ಶಾಸಕರ ಸಮ್ಮುಖದಲ್ಲೂ ಈ ನಿರ್ಣಯವಾಗಿತ್ತು. ಆದರೆ, ಕಳೆದ ಐದು ವರ್ಷಗಳಿಂದ ಯಾವುದೇ ಉದ್ಯೋಗ ಆದೇಶ ಹೊರಬಂದಿಲ್ಲ. ಕಳೆದ 11 ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ನೂರಾರು ಅಭ್ಯರ್ಥಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ ಎಂದು ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಮುಂದಿನ ಒಂದೆರಡು ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ರೈತ ಸಂಘಟನೆಗಳೊಂದಿಗೆ ಸೇರಿ ಎಂಆರ್‌ಪಿಎಲ್ ಮುಂಭಾಗ ಬೃಹತ್ ಚಳುವಳಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಿತಿಯ ಸಂಚಾಲಕ ಡೋನಿ ಸುವಾರಿಸ್, ಕಾರ್ಯದರ್ಶಿ ಕೇಶವ ಶೆಟ್ಟಿ, ಪ್ರೇಮನಾಥ ಪೂಜಾರಿ ಸೇರಿದಂತೆ ನೂರಾರು ನಿರ್ವಸಿತರು ಸಭೆಯಲ್ಲಿ ಭಾಗವಹಿಸಿದ್ದರು.
Post a Comment