ಡೇವಿಡ್ ಡಿಸೋಜ ಶೂಟ್‌ಔಟ್‌ಗೆ ಸುಪಾರಿ: ಗುತ್ತಿಗೆ ಕೈತಪ್ಪಿದ ಆಕ್ರೋಶದಲ್ಲಿ ಕಿಶೋರ್ ರಾಮ ಪೂಜಾರಿ ಕೃತ್ಯ

ಉಡುಪಿ: ಉದ್ಯಮಿ ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು, ಅದಾನಿ ಯುಪಿಸಿಎಲ್‌ನ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕೈತಪ್ಪಿದ ಆಕ್ರೋಶದಲ್ಲಿ ಉಚ್ಚಿಲದ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ ತನ್ನ ಸಹೋದರ ಹಾಗೂ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಯುಪಿಸಿಎಲ್‌ನ ಪೈಪ್‌ಲೈನ್ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿ ತನ್ನ ಬದಲಿಗೆ ಡೇವಿಡ್ ಡಿಸೋಜಗೆ ಸಿಕ್ಕಿದ್ದರಿಂದ ಕಿಶೋರ್ ಪೂಜಾರಿ ಆಕ್ರೋಶಗೊಂಡಿದ್ದ. ಈ ಹಿನ್ನೆಲೆಯಲ್ಲಿ ಡೇವಿಡ್ ಹತ್ಯೆಗೆ ₹10 ಲಕ್ಷ ಸುಪಾರಿ ನೀಡಿದ್ದ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು, ಅನ್ನೋಲ್, ಜಿಯಾಹುಲ್ ಸೇರಿದಂತೆ ಹಣಕಾಸಿನ ನೆರವು ನೀಡಿದ ಮೊಹಮ್ಮದ್ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರನ್ನು ಬಂಧಿಸಲಾಗಿದೆ. ಬಿಹಾರದ ಸೂರಜ್ ನೀಡಿದ ಸುಳಿವಿನ ಆಧಾರದ ಮೇಲೆ ಮುಂಬೈನ ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಬೆಳಗಾವಿಯ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್‌ನನ್ನು ನಿಪ್ಪಾಣಿಯಲ್ಲಿ ಬಂಧಿಸಲಾಗಿದೆ.

ಉಡುಪಿಗೆ ಆರೋಪಿಯನ್ನು ಕರೆತರುತ್ತಿದ್ದ ವೇಳೆ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಆತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಕೊಲ್ಲೂರು ಎಸ್‌ಐ ಅವರ ಆಯುಧ ಕಸಿದು ಗುಂಡು ಹಾರಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಕುಂದಾಪುರ ಎಸ್‌ಐ ನಂಜ ನಾಯ್ಕ ಅವರು ಅನುಜ್ ಪಾಟೀಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಅನುಜ್‌ನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ 11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Post a Comment

Previous Post Next Post