ಸಮಾಜ ಸೇವಾ ಕಾರ್ಯಗಳ ಮೂಲಕ ಆತ್ಮತೃಪ್ತಿ: ಹರಿಕೃಷ್ಣ ಪುನರೂರು ; ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್‌ಸೈಟ್ ಅನಾವರಣ

ಮಂಗಳೂರು : ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯವನ್ನು ಇಳಿ ವಯಸ್ಸಿನವರೆಗೂ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ dkwju.com ವೆಬ್‌ಸೈಟ್‌ ಅನ್ನು ಸೋಮವಾರ ನಗರದ ಪತ್ರಿಕಾಭವನದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.

“ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಎಂಬ ಮಾತಿನಂತೆ ತಾವು ಕಾರ್ಯನಿರ್ವಹಿಸುತ್ತಾ ಬಂದಿರುವುದಾಗಿ ತಿಳಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಸೇವೆ ಮಾಡುವುದರ ಜೊತೆಗೆ ಸಮಾಜ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುವುದಾಗಿ ಹೇಳಿದರು.

ಮನೆಯಿಲ್ಲದವರಿಗೆ ಸರ್ಕಾರದ ನೆರವಿನೊಂದಿಗೆ ಮನೆ ನಿರ್ಮಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, 101 ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟಿರುವುದಾಗಿ ತಿಳಿಸಿದರು. ಖ್ಯಾತ ನೇತ್ರ ತಜ್ಞ ಡಾ. ಮೋದಿ ಅವರ ಸಹಕಾರದೊಂದಿಗೆ ಹಲವು ಕಣ್ಣಿನ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗಿದೆ ಎಂದರು.

ತಮ್ಮ ಊರಿನಲ್ಲಿ ಸರ್ಕಾರಿ ಕನ್ನಡ ಶಾಲೆ ನಿರ್ಮಿಸಿದ ತೃಪ್ತಿಯೂ ಇದೆ. ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತಮ್ಮ ಪತ್ನಿಯ ಸಹಕಾರ ಹಾಗೂ ದೇವರು ನೀಡಿರುವ ಆರೋಗ್ಯವೇ ಕಾರಣ ಎಂದು ಅವರು ಹೇಳಿದರು.

“ಆರೋಗ್ಯ ಚೆನ್ನಾಗಿರುವವರೆಗೆ ಇದೇ ರೀತಿಯ ಸಮಾಜ ಸೇವಾ ಚಟುವಟಿಕೆಗಳನ್ನು ಮುಂದುವರಿಸುವ ಇಚ್ಛೆ ಇದೆ,” ಎಂದು ಹರಿಕೃಷ್ಣ ಪುನರೂರು ಹೇಳಿದರು.

ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ಈಗಾಗಲೇ ನೀಡಿರುವ ಭರವಸೆಯಂತೆ ಮುಂದೆಯೂ ಸಹಕಾರ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಹರಿಕೃಷ್ಣ ಪುನರೂರು ಅವರು ಸುದೀರ್ಘ ಕಾಲದಿಂದ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆಯ ಕುರಿತು ಈಗಾಗಲೇ ಕೃತಿ ಬಿಡುಗಡೆಯಾಗಿದ್ದು, ಅದರಲ್ಲಿ ಅವರ ಸೇವಾ ಕಾರ್ಯಗಳ ಕುರಿತು ಸಾಕಷ್ಟು ವಿವರಗಳಿವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ದಕ್ಷಿಣ ಕನ್ನಡ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಹಾಗೂ ಗೃಹ ನಿರ್ಮಾಣ ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಕೆ. ವಂದಿಸಿದರು.

Post a Comment

Previous Post Next Post