'ಅಂಡಮಾನ್ ಇತಿಹಾಸದೊಳಗೊಂದು ಪಯಣ' : ಇತಿಹಾಸ ಹೇಳದ ಅದೆಷ್ಟೋ ವಿಷಯಗಳಿಗೆ ವೇದಿಕೆಯಾದ ಕೃತಿ : ಪ್ರೊ. ವಿಜಯ ಪೂಣಚ್ಚ ತಂಬಂಡ

ಮಂಗಳೂರು : ಇತಿಹಾಸ ಹೇಳದ ಅದೆಷ್ಟೋ ವಿಷಯಗಳನ್ನು ತೆರೆದಿಡುವ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಕೃತಿ, ಅನುವಾದ ಕೃತಿಯೆಂಬ ಭಾವನೆ ಮೂಡಿಸದೆ ಓದುಗರನ್ನು ತನ್ನೊಂದಿಗೆ ಕರೆದೊಯ್ಯುತ್ತದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಜಯ ಪೂಣಚ್ಚ ತಂಬಂಡ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಅನೇಕಾಂತ ಫೌಂಡೇಷನ್ ಟ್ರಸ್ಟ್ ಹಾಗೂ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಡಾ. ರಾಜಲಕ್ಷ್ಮಿ ಅವರ ಅನುವಾದಿತ ಕೃತಿ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಬಿಡುಗಡೆ ಹಾಗೂ ‘ಅಂಡಮಾನ್ ಇತಿಹಾಸ: ದುಡಿದ ಕೈಗಳು, ಮಿಡಿದ ಮನಗಳು’ ವಿಷಯದ ವಿಚಾರ ಸಂಕಿರಣದಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು.

ಅಂಡಮಾನ್ ಎಂದಾಕ್ಷಣ ಅಲ್ಲಿನ ಜನರ ವಿಚಿತ್ರ ವರ್ತನೆಯ ಚಿತ್ರಣವೇ ಸಾಮಾನ್ಯವಾಗಿ ಕಣ್ಣ ಮುಂದೆ ಬರುತ್ತದೆ. ಆದರೆ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಕಾಲಘಟ್ಟ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಲ್ಲಿದ್ದ ಖೈದಿಗಳು ಮತ್ತು ಮೂಲನಿವಾಸಿಗಳ ನಿತ್ಯದ ಬದುಕನ್ನು ಕೃತಿ ಅಚ್ಚುಕಟ್ಟಾಗಿ ಅನಾವರಣಗೊಳಿಸುತ್ತದೆ ಎಂದು ಅವರು ಹೇಳಿದರು.

ಕ್ಷುಲ್ಲಕ ಕಾರಣಗಳಿಗಾಗಿ ಅಪರಾಧದ ಶಿಕ್ಷೆಯ ಭಾಗವಾಗಿ ಅಂಡಮಾನ್‌ನಲ್ಲಿ ನೆಲೆಸಬೇಕಾಗಿ ಬಂದ ಹಾಗೂ ಕುಟುಂಬದಿಂದ ತ್ಯಜಿಸಲ್ಪಟ್ಟ ಮಹಿಳಾ ಖೈದಿಗಳ ಮನೋವೇದನೆಯನ್ನು ಕೃತಿ ಎಳೆಎಳೆಯಾಗಿ ತೆರೆದಿಡುತ್ತದೆ. ಮತ್ತೊಂದೆಡೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಗೆ ಬೆಂಬಲ ನೀಡಿದ ಜಪಾನೀ ಸೈನಿಕರು ಅಲ್ಲಿ ಅನುಭವಿಸಿದ ಸಾಂಸ್ಕೃತಿಕ ತಲ್ಲಣ, ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕಥಾ ರೂಪದಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿರುವುದು ಕೃತಿಯ ವಿಶೇಷತೆ ಎಂದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು ಅವರು ‘ದಿಟ್ಟ ಹೆಜ್ಜೆಯ ಗಟ್ಟಿಗಿತ್ತಿಯರು’ ವಿಷಯದ ಕುರಿತು ವಿಚಾರ ಮಂಡಿಸಿದರು. ವಿಶ್ವವಿದ್ಯಾಲಯ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಗಣಪತಿ ಗೌಡ ಎಸ್. ಅವರು ‘ವಸಾಹತುಶಾಹಿ ಪ್ರಭುತ್ವ ಮತ್ತು ಪ್ರತಿರೋಧ’ ವಿಷಯದ ಕುರಿತು ಮಾತನಾಡಿದರು.

ಕೃತಿಯ ಲೇಖಕಿ ಡಾ. ರಾಜಲಕ್ಷ್ಮಿ ಎನ್.ಕೆ. ಮಾತನಾಡಿ, ಅಂಡಮಾನ್ ಕೇವಲ ಇತಿಹಾಸ ಮತ್ತು ರಕ್ತದ ಕಲೆಗಳಿರುವ ನೆಲವಲ್ಲ; ಅಲ್ಲಿನ ಜನರ ಆರ್ತಧ್ವನಿಯನ್ನು ಹುಡುಕುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಲಾಗಿದೆ ಎಂದರು. ಕೇವಲ ಪಠ್ಯಪುಸ್ತಕದಲ್ಲಿರುವ ವಿಷಯವಷ್ಟೇ ಇತಿಹಾಸವಲ್ಲ. ಅದರಾಚೆಗಿನ ಬದುಕಿನ ತಲ್ಲಣಗಳು ಮತ್ತು ಭರವಸೆಗಳನ್ನೂ ದಾಖಲಿಸಬೇಕೆಂಬ ಪ್ರೇರಣೆಯಿಂದ ಕೃತಿ ರಚಿಸಲಾಗಿದೆ ಎಂದು ಹೇಳಿದರು.

ಹಿಂದಿ ಭಾಷೆಯಲ್ಲಿ ಶಕುಂತಲಾ ಶಿವರಾಂ ಅವರು ಬರೆದ ಕೃತಿಯನ್ನು ಈಗಾಗಲೇ ಇಂಗ್ಲಿಷ್‌ಗೆ ಅನುವಾದಿಸಲಾಗಿದ್ದು, ಅದನ್ನು ಕನ್ನಡಕ್ಕೆ ಅನುವಾದಿಸಲಾಗಿದೆ ಎಂದು ಅವರು ವಿವರಿಸಿದರು. ಮಹಿಳೆಯರು ವ್ಯವಸ್ಥೆಯ ಭಾಗವಾಗಿದ್ದರೂ ಅವರ ಪಾತ್ರಗಳು ಹಲವು ಸಂದರ್ಭಗಳಲ್ಲಿ ಗೌಣವಾಗಿರುವ ಹಿನ್ನೆಲೆಯಲ್ಲಿ, ಅವರ ದೃಷ್ಟಿಕೋನ ಹಾಗೂ ದೇಶ ನಿರ್ಮಾಣದಲ್ಲಿ ಅವರ ಪಾತ್ರದ ಮಹತ್ವವನ್ನು ದಾಖಲಿಸುವ ಉದ್ದೇಶವೂ ಕೃತಿಯ ಹಿಂದಿದೆ ಎಂದರು.

ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅತಿಥಿಯಾಗಿ ಉಪಸ್ಥಿತರಿದ್ದರು.

ಅನೇಕಾಂತ ಫೌಂಡೇಶನ್ ಟ್ರಸ್ಟ್‌ನ ಡಾ. ಉದಯ ಕುಮಾರ್ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಹನಾ ನಿಡಗುಂದಿ ಆಶಯಗೀತೆ ವಾಚಿಸಿದರು. ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

Previous Post Next Post