ಮೈಸೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾದ ಮಹಿಳೆಯೊಬ್ಬರು, ಪತಿ ಹಾಗೂ ಅವರ ಕುಟುಂಬಸ್ಥರಿಂದ ಮೋಸಕ್ಕೊಳಗಾಗಿದ್ದೇನೆ ಎಂದು ಆರೋಪಿಸಿ ಹಸುಗೂಸಿನೊಂದಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮಹಾಲಿಂಗಪುರ ತಾಂಡದ ಸಿಂಧು ಅವರು, ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಸೊಳ್ಳಾಪುರ ಗ್ರಾಮದ ರಾಕೇಶ್ ಅವರನ್ನು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಜನಿಸಿದೆ.
ಆದರೆ ಮದುವೆಯಾದ ಬಳಿಕ ಪತಿ ರಾಕೇಶ್ ಹಾಗೂ ಅವರ ಕುಟುಂಬಸ್ಥರು ತನ್ನನ್ನೂ ಹಸುಗೂಸನ್ನೂ ಮನೆಯಿಂದ ಹೊರಹಾಕಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಹಸುಗೂಸನ್ನು ಮಡಿಲಲ್ಲಿ ಹಿಡಿದು ಕಣ್ಣೀರು ಹಾಕಿದ ಸಿಂಧು, ಬಳಿಕ ಪೊಲೀಸ್ ಠಾಣೆಗೆ ತೆರಳಿ ತನಗೆ ಮತ್ತು ಮಗುವಿಗೆ ರಕ್ಷಣೆ ಹಾಗೂ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
"ಪ್ರೀತಿಯನ್ನು ನಂಬಿ ಮನೆ ಬಿಟ್ಟು ಬಂದಿದ್ದೇನೆ. ಈಗ ನನ್ನ ಬದುಕು ಅತಂತ್ರವಾಗಿದೆ" ಎಂದು ಸಿಂಧು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ತಾಯಿ ಮತ್ತು ಹಸುಗೂಸಿನ ಪರಿಸ್ಥಿತಿ ಕಂಡು ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Post a Comment