ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಶಂಕಿತ ಬಾಂಗ್ಲಾ ವಲಸಿಗರ ಪತ್ತೆಗಾಗಿ ನಗರ ಪೊಲೀಸರು ಸೋಮವಾರ ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಿಕಾನದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮೂವರು ಶಂಕಿತ ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿದ ಪೊಲೀಸರು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಕೋಡಿಕಲ್ನ ನಿರ್ಮಾಣ ಹಂತದ ಮತ್ತೊಂದು ಕಟ್ಟಡದಲ್ಲೂ ಶಂಕಿತ ಬಾಂಗ್ಲಾ ಪ್ರಜೆಗಳು ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ವಾರ ಸುರತ್ಕಲ್ನ ಮುಕ್ಕ ಪ್ರದೇಶದಲ್ಲಿ ಎಂಟು ಶಂಕಿತ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಆಯುಕ್ತರ ನಿರ್ದೇಶನದಂತೆ ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಪಾಸಣೆ ಹಾಗೂ ಪರಿಶೀಲನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ನಗರದ ವಿವಿಧ ನಿರ್ಮಾಣ ಹಂತದ ಕಟ್ಟಡಗಳು, ಕಾರ್ಮಿಕರ ವಸತಿ ಸ್ಥಳಗಳು ಹಾಗೂ ಇತರ ಪ್ರದೇಶಗಳಲ್ಲಿ ದಾಖಲೆ ಪರಿಶೀಲನೆ ಮತ್ತು ಗುರುತು ದೃಢೀಕರಣ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Post a Comment