ಮಂಗಳೂರು : ಬ್ಯಾಂಕ್ ರಾಷ್ಟ್ರೀಕರಣದ 58ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಜಪೆಯ ಹಳೆ ವಿಮಾನ ನಿಲ್ದಾಣ ರಸ್ತೆಯ ವಿಜಯ ಮಂಗಳ ಲೇಔಟ್‌ನಲ್ಲಿ ಭಾನುವಾರ 'ಭೂಮಿಯನ್ನು ಉಳಿಸಲು ಸಸಿ ನೆಡಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಶಿವರಾಮ ಆಳ್ವ, 1969ರ ಜುಲೈ 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ ಐತಿಹಾಸಿಕ ನಿರ್ಧಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು ಎಂದು ಹೇಳಿದರು. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆ 'ವರ್ಗ ಬ್ಯಾಂಕಿಂಗ್'ನಿಂದ 'ಜನಸಾಮಾನ್ಯರ ಬ್ಯಾಂಕಿಂಗ್' ಆಗಿ ಪರಿವರ್ತನೆಯಾಗಿ, ಗ್ರಾಮೀಣ ಹಾಗೂ ಬಡ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆಗಳು ತಲುಪಿದವು ಎಂದು ತಿಳಿಸಿದರು.
1980ರಲ್ಲಿ ಮತ್ತಷ್ಟು ಆರು ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಈ ಉದ್ದೇಶಕ್ಕೆ ಹೆಚ್ಚಿನ ಬಲ ದೊರೆಯಿತು. ಪ್ರತಿವರ್ಷ ಜುಲೈ 19ರಂದು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಬಾರಿ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಆರ್. ಭಟ್ ಮಾತನಾಡಿ, ರಾಷ್ಟ್ರೀಕರಣದ ಬಳಿಕ ಬ್ಯಾಂಕ್ ಶಾಖೆಗಳು ದೇಶದ ಅತ್ಯಂತ ದೂರದ ಪ್ರದೇಶಗಳಿಗೂ ವಿಸ್ತರಿಸಲ್ಪಟ್ಟಿದ್ದು, ಸಮಾಜದ ಎಲ್ಲ ವರ್ಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳು ದೊರೆಯುವಂತಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುದ್ರಾಣಿ ಹೋಮ್ಸ್‌ನ ಪಾಲುದಾರ ಗುರುರಾಜ್ ಶೆಣೈ, ವಿಜಯ ಮಂಗಳ ಹೌಸಿಂಗ್ ಸಹಕಾರ ಸಂಘದ ಅಧ್ಯಕ್ಷ ಕೆ. ಬಾಲಪ್ಪ ಶೆಟ್ಟಿ, ಪದಾಧಿಕಾರಿಗಳಾದ ಕೆ. ಜಯಂತ ಶೆಟ್ಟಿ, ಎಂ. ಶ್ರೀಧರ ಶೆಟ್ಟಿ, ಎಂ. ದಯಾನಂದ ಶೆಟ್ಟಿ, ಕಮಲಾಕ್ಷ ಹಾಗೂ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment