Putturu : ಪುತ್ತೂರಿನಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಜಾನುವಾರು, ಪಿಕ್‌ಅಪ್ ವಾಹನ ವಶಕ್ಕೆ – ಇಬ್ಬರ ವಿರುದ್ಧ ಪ್ರಕರಣ

ಪುತ್ತೂರು: ಅಕ್ರಮವಾಗಿ ಜಾನುವಾರನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೂನ್ 25ರಂದು ಸಂಜೆ, ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರಿಗೆ ಅಕ್ರಮ ಗೋಸಾಗಾಟದ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ KA-21-5450 ನೋಂದಣಿಯ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಪತ್ತೆಯಾಯಿತು.

ವಾಹನದ ಚಾಲಕ ನಾರಾಯಣ ಹಾಗೂ ಸಹಪ್ರಯಾಣಿಕ ಮೊಯ್ದುಕುಂಞ ಅವರನ್ನು ವಿಚಾರಿಸಿದಾಗ, ಜಾನುವಾರು ಸಾಗಾಟಕ್ಕೆ ಅಗತ್ಯವಾದ ಯಾವುದೇ ಪೂರ್ವಾನುಮತಿ ಅಥವಾ ದಾಖಲೆಗಳು ಇಲ್ಲದಿರುವುದು ದೃಢಪಟ್ಟಿದೆ.

ಪೊಲೀಸರು ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026 ಅಡಿಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 7, 12 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯ ಕಲಂ 11(ಡಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
Previous Post Next Post