Dubai Accident | ದುಬೈನಲ್ಲಿ ಭೀಕರ ಅಪಘಾತ : ಟ್ರಕ್‌ಗೆ ಮಿನಿ ಬಸ್ ಡಿಕ್ಕಿ, 7 ಭಾರತೀಯ ಕಾರ್ಮಿಕರ ಸಾವು; 5 ಮಂದಿಯ ಸ್ಥಿತಿ ಗಂಭೀರ

ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಭಾರತೀಯರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 
ಗಾಯಾಳುಗಳಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಂತ್ರಿಕ ದೋಷದಿಂದಾಗಿ ಟ್ರಕ್ ಒಂದು ರಸ್ತೆಯ ಮಧ್ಯಭಾಗದಲ್ಲೇ ನಿಂತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಮಿನಿ ಬಸ್ ಅದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ದುಬೈ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಿನಿ ಬಸ್ ಚಾಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾದುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಅಪಘಾತದ ತೀವ್ರತೆಗೆ ಮಿನಿ ಬಸ್ ಸಂಪೂರ್ಣ ಜಖಂಗೊಂಡಿದ್ದು, ದುಬೈ ಆಡಳಿತ ಬಿಡುಗಡೆ ಮಾಡಿರುವ ಚಿತ್ರಗಳು ದುರಂತದ ಭೀಕರತೆಯನ್ನು ಬಿಂಬಿಸುತ್ತವೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರು ಭಾರತೀಯ ಕಾರ್ಮಿಕರಾಗಿದ್ದು, ಮೃತರಲ್ಲಿ ಬಹುತೇಕರು ಭಾರತೀಯರೆಂದು ವರದಿಯಾಗಿದೆ.

ಘಟನೆಯ ಬಳಿಕ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ X ಮೂಲಕ ಸಂತಾಪ ಸೂಚಿಸಿದೆ. ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಭಾರತೀಯರನ್ನು ಭೇಟಿಯಾಗಿದ್ದು, ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತರ ಹಾಗೂ ಗಾಯಾಳುಗಳ ಕುಟುಂಬಗಳಿಗೆ ಸಹಕಾರ ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.

Post a Comment

Previous Post Next Post