ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಎಂಡಿಎಂಎ (MDMA) ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ₹16.40 ಲಕ್ಷ ಎಂದು ಅಂದಾಜಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಹೊಯಿಗೆ ಬಜಾರ್ ಪ್ರದೇಶದ ಮನೆಯಿಂದ ಮಾದಕವಸ್ತು ಮಾರಾಟ ಮಾಡುತ್ತಿದ್ದ ಪ್ರಣಾಮ್ ಕೋಟ್ಯಾನ್ (30) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 104 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕಮಾಪನ ಯಂತ್ರ ಹಾಗೂ ಜಿಪ್‌ಲಾಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕವಸ್ತುವಿನ ಮೌಲ್ಯ ಸುಮಾರು ₹10.40 ಲಕ್ಷ ಎಂದು ತಿಳಿದುಬಂದಿದೆ.
ಎರಡನೇ ಪ್ರಕರಣದಲ್ಲಿ ಪದವಿನಂಗಡಿ ಸಮೀಪದ ಮನೆಯಿಂದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಧನರಾಜ್ ಪೂಜಾರಿ ಅಲಿಯಾಸ್ ಧನು ವಳಚಿಲ್ (33) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 60 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕಮಾಪನ ಯಂತ್ರ ಹಾಗೂ ಜಿಪ್‌ಲಾಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ₹6 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಈ ಹಿಂದೆಯೂ ಹಲ್ಲೆ, ಬೆದರಿಕೆ, ಗಾಂಜಾ ಮಾರಾಟ, ಮಾದಕವಸ್ತು ಸೇವನೆ, ಕೊಲೆ ಹಾಗೂ ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡ್ರಗ್ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.
Post a Comment