ಏಕಾಗ್ರತೆ ಮತ್ತು ಶುದ್ಧಿಯೇ ದೇವರ ದರ್ಶನದ ಮೂಲ ; ಅರ್ತಿವೊಡಲು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಪಾಲನಾಥ ಸ್ವಾಮೀಜಿ ಸಂದೇಶ

ಕಾವೂರು ಸಮೀಪದ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಭಕ್ತಿ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯದೊಂದಿಗೆ ಭಕ್ತರ ಮನಸ್ಸನ್ನು ಸ್ಪರ್ಶಿಸಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ನರೇಶ್ ರೈ ದೆಪ್ಪುಣಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ವಿಷ್ಣುಮೂರ್ತಿ ಕ್ಷೇತ್ರವು ಪ್ರಕೃತಿ ರಮಣೀಯ ಸ್ಥಳದಲ್ಲಿದ್ದು, ಒಂದು ಕ್ಷೇತ್ರ ಅಭಿವೃದ್ಧಿಯಾಗುವುದರಿಂದ ಆ ಪ್ರದೇಶವೂ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ದೇವರ ದರ್ಶನಕ್ಕೆ ಮನಸ್ಸಿನ ಏಕಾಗ್ರತೆ ಅತ್ಯಂತ ಮುಖ್ಯವಾಗಿದ್ದು, ಕಾಯಿ ಶುದ್ಧಿ ಮತ್ತು ಮನ ಶುದ್ಧಿಯೊಂದಿಗೆ ದೇವರನ್ನು ಆರಾಧಿಸಿದಾಗ ಮಾತ್ರ ನಿಜವಾದ ಅನುಭವ ಸಿಗುತ್ತದೆ ಎಂದು ಅವರು ಹೇಳಿದರು. ಬ್ರಹ್ಮಕಲಶವು ಕ್ಷೀಣವಾಗುತ್ತಿರುವ ದೈವಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸುವ ವಿಧಾನವಾಗಿದ್ದು, ದೇವಸ್ಥಾನಗಳು ಅಸತ್ಯದಿಂದ ಸತ್ಯದ ಕಡೆಗೆ ದಾರಿ ತೋರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ದೇವಾಲಯಕ್ಕೆ ಶಾಂತಿಯನ್ನು ಅರಸಿ ಬರಬೇಕಾಗಿದ್ದು, ಮೊಬೈಲ್ ಬಳಕೆಯಿಂದ ಅಶಾಂತಿ ಉಂಟಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಭಕ್ತಿಯ ಭಾವನೆಗೆ ತಕ್ಕಂತೆ ದೇವರು ಫಲ ನೀಡುತ್ತಾನೆ ಎಂಬುದನ್ನೂ ಅವರು ತಿಳಿಸಿದರು.

ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಅರ್ಚಕರಾದ ಕೃಷ್ಣ ಅಡಿಗ ಕದ್ರಿ, ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ. ಎಸ್, ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಕಾವೂರ್ ಇದರ ಅಧ್ಯಕ್ಷ ಕಿಶೋರ್ ಸುವರ್ಣ, ಕಾವೂರ್ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ  ಧನಂಜಯ ಬಂಗೇರ, ವಿಷ್ಣುಮೂರ್ತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ. ನಾರಾಯಣ ಮಯ್ಯ, ಪ್ರಮುಖರಾದ ರಮಾನಂದ ಭಂಡಾರಿ, ಪ್ರತೀಕ್ ಪೂಜಾರಿ, ರಾಜೇಶ್ ಶೆಟ್ಟಿ ಮಡಕಣ ಗುತ್ತು, ಹರ್ಷಿತ ಕೇಟರಿಂಗ್ ಮಾಲೀಕ ಹರೀಶ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಿಠಲ ಆಳ್ವ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಪೂಜಾರಿ, ಮಾಜಿ ಮೇಯರ್ ಕವಿತಾ ಸನಿಲ್ ಮೊದಲಾದವರು ಹಾಜರಿದ್ದರು.

ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು. ಕ್ಷೇತ್ರದ ಮೊಕ್ತೇಸರ ಜಗದೀಶ್ ಶೆಟ್ಟಿ ಮುರ ಪ್ರಾಸ್ತಾವಿಕ ಮಾತನಾಡಿದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕುಡುಪು ಇಲ್ಲಿನ ವೇದಮೂರ್ತಿ ಶ್ರೀ ಕೃಷ್ಣರಾಜ ತಂತ್ರಿ ಉದ್ಘಾಟಿಸಿದರು. ದೇವರು ಕಲೆಗಳಿಗೆ ಆಶ್ರಯದಾತ. ಕಲೆ ದೇವರಿಗೆ ಪ್ರಿಯ. ಕೊoರ್ಗಿಬೈಲ್ ನ ಈ ಸ್ಥಳ ಪ್ರಕೃತಿ ಆರಾಧನೇಯ ಸ್ಥಳ. ಫ್ಯಾನ್ ಇಲ್ಲದೆಯೂ ಕಾರ್ಯಕ್ರಮ ವೀಕ್ಷಿಸಬಹುದು ಎಂದರು. ಗೀತಾನಂದ ಅಡಪ್ಪ, ವಿಠಲ ಆಳ್ವ, ನರೇಶ್ ರೈ ದೆಪ್ಪುಣಿಗುತ್ತು ಹಾಜರಿದ್ದರು.
ಡಾ. ಪ್ರಿಯ ಹರೀಶ್, ಶಿಲ್ಪಾ ಮತ್ತು ಸುರೇಖಾ ಕಾರ್ಯಕ್ರಮವನ್ನು ನಿರೂಪಿಸಿದರು.
Previous Post Next Post