ಮಂಗಳೂರು: ಹಾಸ್ಟೆಲ್ ಬಿಟ್ಟು ರೂಮ್ ಮಾಡಿ ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರಿನಲ್ಲಿ ವಿದ್ಯಾರ್ಥಿಗಳೇ ಡ್ರಗ್ಸ್ ಪೂರೈಕೆ ಜಾಲದಲ್ಲಿ ತೊಡಗಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದೇ ಮೊದಲ ಬಾರಿಗೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದಲ್ಲಿ ಆತಂಕ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಐವರು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಪೆಡ್ಡ್ಲಿಂಗ್ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾಸ್ಟೆಲ್ ಬಿಟ್ಟು ಹೊರಗಡೆ ರೂಮ್ ಮಾಡಿಕೊಂಡಿದ್ದ ಈ ವಿದ್ಯಾರ್ಥಿಗಳು, ಅಲ್ಲಿ ಡ್ರಗ್ಸ್ ಸಂಗ್ರಹಿಸಿ ಪ್ಯಾಕಿಂಗ್ ಮಾಡಿ ಇತರರಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದ ಕುರಿತು ಹೇಳಿಕೆ ನೀಡಿದ ಕಮಿಷನರ್ ಸುಧೀರ್ ರೆಡ್ಡಿ, ವಿದ್ಯಾರ್ಥಿಯೊಬ್ಬನ ತಾಯಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. 

ಪರಿಶೀಲನೆ ವೇಳೆ, ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಡ್ರಗ್ಸ್ ವಹಿವಾಟು ನಡೆಸುತ್ತಿರುವುದು ಪತ್ತೆಯಾಗಿದೆ.
ಬಂಧಿತ ವಿದ್ಯಾರ್ಥಿಗಳು ಮಂಗಳೂರಿನ ವಿವಿಧ ಕಾಲೇಜುಗಳಿಗೆ ಸೇರಿದವರಾಗಿದ್ದು, ಒಟ್ಟು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 10 ಹೊರಗಿನವರಿಗೆ ಡ್ರಗ್ಸ್ ಪೂರೈಕೆ ಮಾಡಿರುವುದು ಗೊತ್ತಾಗಿದೆ.
ಪೊಲೀಸರು ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಕೌನ್ಸೆಲಿಂಗ್‌ ನೀಡಲು ಮುಂದಾಗಿದ್ದಾರೆ.

ಇದೇ ವೇಳೆ, ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಟ್ಟುಕೊಳ್ಳಬೇಕು, ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಗಮನಿಸಬೇಕು ಎಂದು ಕಮಿಷನರ್ ಮನವಿ ಮಾಡಿದ್ದಾರೆ.
ಬಂಧಿತರಾದವರು ಮೇಜರ್ ವಿದ್ಯಾರ್ಥಿಗಳಾಗಿದ್ದು, ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Previous Post Next Post