ವಿಟ್ಲದಲ್ಲಿ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸರ ದಾಳಿ: ನಾಲ್ವರ ಬಂಧನ, ಇಬ್ಬರು ಪರಾರಿ

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲಕಸಬ ಗ್ರಾಮದ ಮಾಡ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ಏಪ್ರಿಲ್ 12ರ ಸಂಜೆ ನಡೆದಿದೆ.
Mooladhwani.in
ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ವೇಳೆ, ಸುಮಾರು 20ರಿಂದ 25 ಮಂದಿ ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕೆಲವರು ಪರಾರಿಯಾಗಿದ್ದು, ಈ ವೇಳೆ ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಹಾಗೂ ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಅವರನ್ನು ಬಂಧಿಸಲಾಗಿದೆ.
ಇದಲ್ಲದೆ, ಆರೋಪಿಗಳಾದ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಪೊಲೀಸರು ಜೂಜಾಟಕ್ಕೆ ಬಳಸಿದ 3 ಕೋಳಿಗಳು, ರೂ.1000 ನಗದು ಸೇರಿದಂತೆ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Previous Post Next Post