ಎಸ್. ಯು. ಪಣಿಯಾಡಿ ಜನ್ಮದಿನದ ಅಂಗವಾಗಿ ‘ಪಣಿಯಾಡಿ ನೆನಪು ಮತ್ತು ತುಳು ಕವಿಗೋಷ್ಠಿ’ ಕಾರ್ಯಕ್ರಮ ; ತುಳು ನಾಡು-ನುಡಿ ಸಂರಕ್ಷಣೆಗೆ ಒತ್ತು

ಮಂಗಳೂರು: ತುಳು ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಬೆಳೆಸಿ ಅದರ ಅಭಿವೃದ್ಧಿಗಾಗಿ ತುಳುವರು ಶ್ರಮಿಸಬೇಕೆಂದು ಹಿರಿಯ ಕನ್ನಡ-ತುಳು ಸಾಹಿತಿ ಹಾಗೂ ಪತ್ರಕರ್ತ ಯಶವಂತ ಬೋಳೂರು ಅಭಿಪ್ರಾಯಪಟ್ಟರು.

ತುಳು ಚಳುವಳಿಯ ನೇತಾರ ಸಾಹಿತಿ ಎಸ್. ಯು. ಪಣಿಯಾಡಿಯವರ ಜನ್ಮದಿನ (ಏಪ್ರಿಲ್ 4) ಅಂಗವಾಗಿ ಮಂಗಳೂರಿನ ಕವಿ ಮಿತ್ರರು ಸುಲ್ತಾನ ಬತ್ತೇರಿ ಬೋಳೂರು ಬೇಯಲ್ಲಿ ಆಯೋಜಿಸಿದ್ದ ‘ಪಣಿಯಾಡಿ ನೆನಪು ಮತ್ತು ತುಳು ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪಣಿಯಾಡಿಯವರು ಹಾಕಿಕೊಟ್ಟ ತುಳು ಚಳುವಳಿಯ ಆಶಯಗಳನ್ನು ಅರಿತು ಮುಂದಿನ ಪೀಳಿಗೆಗೆ ಮುನ್ನಡೆಸುವುದು ಅತ್ಯಗತ್ಯ ಎಂದರು.

ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ, ಕನ್ನಡ ನವೋದಯ ಸಾಹಿತ್ಯದ ಕಾಲದಲ್ಲಿಯೇ ಪಣಿಯಾಡಿಯವರು ತುಳುವಿನಲ್ಲಿ ಸಾಹಿತ್ಯ ರಚನೆ ಮಾಡಿ ವಿಶಿಷ್ಟ ಗುರುತು ಮೂಡಿಸಿದರು. ತುಳು ಮಹಾಸಭೆ, ತುಳುನಾಡ್ ಪ್ರೆಸ್, ತುಳುನಾಡ್ ಬ್ಯಾಂಕ್ ಮತ್ತು ‘ಅಂತರಂಗ’ ಪತ್ರಿಕೆಗಳ ಮೂಲಕ ಸಾಮಾಜಿಕ-ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದ ಅವರು ಸ್ವಾತಂತ್ರ್ಯ ಹೋರಾಟ ಹಾಗೂ ತುಳು ಚಳುವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕವಿಗಳು ಹಾಗೂ ಲೇಖಕರು ಪಣಿಯಾಡಿಯವರ ನೆನಪಿನಲ್ಲಿ ಕವನ ವಾಚಿಸಿದರು. ಯಶವಂತ ಬೋಳೂರು ‘ತುಳುನಾಡು’, ರೇಮಂಡ್ ಡಿಕೂನ್ಹಾ ತಾಕೊಡೆ ‘ದೂರುನ ಅಭ್ಯಾಸ’, ಸುಧಾನಾಗೇಶ್ ‘ಮದೆಕ್ ಪೋತೊಂದು’, ವೆಂಕಟೇಶ್ ಗಟ್ಟಿ ‘ನಮ ತುಳುವೆರ್’, ಗೀತಾ ಲಕ್ಷ್ಮೀಶ್ ‘ಕನ ನನ ಆವೊಡು’, ಮಾಲತಿ ಶೆಟ್ಟಿ ಮಾಣೂರು ‘ಪೆರ್ಮೆ’, ಎನ್. ಸುಬ್ರಾಯ ಭಟ್ ‘ಉಲ್ಲೆರಪ್ಪಾ ಉಲ್ಲೆರ್’ ಕವನಗಳನ್ನು ಪ್ರಸ್ತುತಪಡಿಸಿದರು.

ಸಾಹಿತಿ ರಘು ಇಡ್ಕಿದು ಅವರು ಪಣಿಯಾಡಿಯವರ ಕಾಲಘಟ್ಟದಲ್ಲಿ ಪ್ರಕಟವಾದ ನಾರಾಯಣ ಶೆಟ್ಟಿ ಕಿಲ್ಲೆ ಅವರ ‘ಕಾನಿಗೆ’ ಕವನ ಸಂಕಲನದ ಆಯ್ದ ಕವನಗಳು ಹಾಗೂ ಮಾಧವ ತಿಂಗಳಾಯರ ‘ಜನ ಮರ್ಲ್’ ನಾಟಕದ ಮಂಗಳ ಪದ್ಯವನ್ನು ವಾಚಿಸಿ ಆ ಕಾಲದ ತುಳು ಸಾಹಿತ್ಯದ ವೈಶಿಷ್ಟ್ಯಗಳನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ನಾಗೇಶ್, ದೇವದಾಸ್ ಬೋಳೂರು ಸೇರಿದಂತೆ ಹಲವರು ಸಹಕರಿಸಿದರು.
Previous Post Next Post