ಹಾವೇರಿ : ನಗರದ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯತನದಿಂದ ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದವರ ಮೇಲೆ ಬಸ್ ಹರಿದು 2 ವರ್ಷದ ಪುಟ್ಟ ಮಗು ಅಸುನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಜಾನೆ ಸುಮಾರು 06.30ಕ್ಕೆ ಘಟನೆ ಸಂಭವಿಸಿದೆ. ವಾಯವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಮಂಜುನಾಥ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.
ಪ್ಲಾಟ್ ಫಾರ್ಮ್ ನಂ.2 ಕಡೆಗೆ ಏಕಾಏಕಿ ಸಾರಿಗೆ ಬಸ್ ನುಗ್ಗಿದ್ದರಿಂದ ಸವಣೂರಿನ ಹಜರತ್ ಅಲಿ (2) ಮಗು ಮೃತಪಟ್ಟಿದೆ. ಘಟನೆಯಲ್ಲಿ ಬಂಕಾಪುರದ ವಾಸುದೇವ (44), ಹರ್ಷ (6), ಕಾವ್ಯಾಂಜಲಿ (39), ಅರಬಜ್‌ಖಾನ್ (13) ಗಾಯಗೊಂಡಿದ್ದಾರೆ.
ಬಸ್ ಹರಿದಿದ್ದರಿಂದ ಹಜರತ್ ಅಲಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಅಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ನಯಿಮ್ ಎಂಬುವವರು ನೀಡಿದ ದೂರಿನ ಮೇರೆಗೆ ಹಾವೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರ ಮೇಲೆ ಬಸ್ ನುಗ್ಗಿದ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Tags
ರಾಜ್ಯ