ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ತನ್ನ ಮಹತ್ವಾಕಾಂಕ್ಷಿ ಆರ್ಟೆಮಿಸ್-2 ಮಿಷನ್ ಮೂಲಕ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕಳುಹಿಸಿದೆ. ಅಪೋಲೋ ಚಂದ್ರಯಾನ ಕಾರ್ಯಕ್ರಮದ ನಂತರ ಸುಮಾರು 50 ವರ್ಷಗಳ ಬಳಿಕ, ಮನುಷ್ಯರನ್ನು ಒಳಗೊಂಡ ಚಂದ್ರ ಮಿಷನ್ ಮತ್ತೆ ಆರಂಭವಾಗಿರುವುದು ಐತಿಹಾಸಿಕ ಕ್ಷಣವಾಗಿದೆ.
ಫ್ಲೋರಿಡಾದ Kennedy Space Center ನಿಂದ ಉಡಾವಣೆಯಾದ ಈ ಭಾರೀ ರಾಕೆಟ್, ನಾಸಾದ ಬಾಹ್ಯಾಕಾಶ ಯೋಜನೆಗಳಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಂದ್ರನ ಮೇಲೆ ಮಾನವ ಇಳಿಯುವ ಗುರಿಯೊಂದಿಗೆ ಈ ಮಿಷನ್ ಪ್ರಮುಖ ಪರೀಕ್ಷಾ ಹಂತವಾಗಿದೆ.
ಈ ಯಾನದಲ್ಲಿ ಮೂವರು ಅಮೇರಿಕನ್ ಹಾಗೂ ಒಬ್ಬ ಕೆನಡಾದ ಗಗನಯಾತ್ರಿಗಳು ಭಾಗಿಯಾಗಿದ್ದಾರೆ.
ಕಮಾಂಡರ್ ಆಗಿ Reid Wiseman ಇದ್ದು, ಪೈಲಟ್‌ಗಳಾಗಿ Victor Glover, Christina Koch ಮತ್ತು ಕೆನಡಾದ Jeremy Hansen ಭಾಗವಹಿಸಿದ್ದಾರೆ. ಈ ತಂಡವು ವೈವಿಧ್ಯತೆಯ ಸಂಕೇತವಾಗಿದ್ದು, ಮೊದಲ ಬಾರಿಗೆ ಮಹಿಳೆ, ಬಿಳಿಯರಲ್ಲದ ವ್ಯಕ್ತಿ ಹಾಗೂ ಯುಎಸ್ ಹೊರಗಿನ ನಾಗರಿಕ ಚಂದ್ರಯಾನಕ್ಕೆ ತೆರಳುತ್ತಿರುವುದು ವಿಶೇಷವಾಗಿದೆ.
ಸುಮಾರು 10 ದಿನಗಳ ಈ ಪರೀಕ್ಷಾ ಹಾರಾಟದಲ್ಲಿ, ಮೊದಲ 25 ಗಂಟೆಗಳು ಭೂಮಿಯ ಸಮೀಪದಲ್ಲೇ ಕಳೆಯಲಾಗುತ್ತದೆ. ನಂತರ ಗಗನನೌಕೆ ಭೂಮಿಯ ಕಕ್ಷೆಯಲ್ಲಿ ಪರೀಕ್ಷೆಗೊಳಪಡಿಸಿ, ಮುಖ್ಯ ಎಂಜಿನ್ ಸಕ್ರಿಯಗೊಳಿಸಿ ಚಂದ್ರನತ್ತ ಪ್ರಯಾಣ ಆರಂಭಿಸುತ್ತದೆ. ಈ ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನಿಗೆ ಸುಮಾರು 7,500 ಕಿಲೋಮೀಟರ್ ದೂರದವರೆಗೆ ಹತ್ತಿರ ಹೋಗಲಿದ್ದಾರೆ.
ಈ ಮಿಷನ್‌ಗೆ ಮೊದಲು ನಡೆದ Artemis I ಯಾನದಲ್ಲಿ ಯಾವುದೇ ಮನುಷ್ಯರಿರಲಿಲ್ಲ. ಆದರೆ ಈ ಬಾರಿ, ಜೀವ ಬೆಂಬಲ ವ್ಯವಸ್ಥೆ, ನೀರು ವಿತರಣೆ ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಓರಿಯನ್ ಕ್ಯಾಪ್ಸುಲ್ ಬಳಸಲಾಗುತ್ತಿದೆ.
ಈ ಐತಿಹಾಸಿಕ ಉಡಾವಣೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಕಡಲತೀರಗಳು ಹಾಗೂ ಬೀದಿಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
1960-70ರ ದಶಕದ ಅಪೋಲೋ ಯುಗದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ ಈ ಕ್ಷಣ, ಬಾಹ್ಯಾಕಾಶ ಸಂಶೋಧನೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
Tags
ವಿದೇಶ