Top News

ಕೆಂಜಾರು ದೇವಸ್ಥಾನ ಕಾಣಿಕೆ ಹುಂಡಿ ಕಳವು : ಅಂತಾರಾಜ್ಯ ಕಳ್ಳನ ಬಂಧನ ; ತಮಿಳುನಾಡು ಮೂಲದ ಶಬಿಕ್ ಎನ್ನುವವನಿಂದ ಕೃತ್ಯ

ಬಜಪೆ : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣವನ್ನು ಭೇದಿಸಿರುವ ಬಜಪೆ ಪೊಲೀಸರು ಅಂತಾರಾಜ್ಯ ಆರೋಪಿತನನ್ನು ಬಂಧಿಸಿದ್ದಾರೆ.
ಮಾರ್ಚ್ 3ರಂದು ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿದ ಆರೋಪಿತನು, ಮೂರು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ₹25,000 ಹಣವನ್ನು ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ತನಿಖೆಯ ವೇಳೆ ಖಚಿತ ಮಾಹಿತಿಯ ಆಧಾರದ ಮೇಲೆ, ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯಾಗಿರುವ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25)ನನ್ನು ಮಾ.31ರಂದು ಬಂಧಿಸಲಾಯಿತು. ವಿಚಾರಣೆಯಲ್ಲಿ ಆತನು ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕಳವಾದ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಕಳವು ಪ್ರಕರಣದಲ್ಲೂ ಆರೋಪಿಯಾಗಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು–ಜೊಕಟ್ಟೆ ಪ್ರದೇಶದಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿತನು ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳವು ಮಾಡಿ ಮತ್ತೆ ತನ್ನ ರಾಜ್ಯಕ್ಕೆ ತೆರಳಿ ತಪ್ಪಿಸಿಕೊಳ್ಳುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಬಾಲಕೃಷ್ಣ ಅವರ ನೇತೃತ್ವದಲ್ಲಿ ಕ್ರೈಂ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ನಡೆಸಿದರು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Post a Comment

Previous Post Next Post