Top News

ಅದ್ಯಪಾಡಿ : ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 15ರಿಂದ ಬ್ರಹ್ಮಕಲಶೋತ್ಸವದ ಸಂಭ್ರಮ

ಮಂಗಳೂರು : ಅದ್ಯಪಾಡಿಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ನಾಲ್ಕನೇ ಸಲದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಾರ್ಚ್ 15ರಿಂದ 20ರವರೆಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾಜಿ ಸಚಿವ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

ದೇವಾಲಯದ ಪ್ರಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಪ್ರಸ್ತುತ ಆಡಳಿತ ಮೊಕ್ತೇಸರರಾದ ಎ.ಮಂಜುನಾಥ ಭಂಡಾರಿ ಶೆಡ್ಡೆ ಹಾಗೂ ಕುಟುಂಬಸ್ಥರ ನೇತೃತ್ವದಲ್ಲಿ ಭಕ್ತರ ಶ್ರದ್ಧಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ಸನಾತನ ಧರ್ಮದ ಸಂಪ್ರದಾಯದಂತೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಈಗ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಉತ್ಸವದ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ದಾನಿಗಳ ಸಹಕಾರದೊಂದಿಗೆ ಅವು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ಇದಲ್ಲದೆ, ಕಳೆದ 25 ವರ್ಷಗಳಿಂದ ದೇವಸ್ಥಾನವು ಮದುವೆ, ಉಪನಯನ ಮುಂತಾದ ಶುಭಕಾರ್ಯಗಳಿಗೆ ತನ್ನ 18,000 ಚದರ ಅಡಿಯ ವಿಶಾಲ ಸಭಾಂಗಣ, ಆಸನ ವ್ಯವಸ್ಥೆ ಹಾಗೂ ಪಾಕಶಾಲೆಯನ್ನು ಉಚಿತವಾಗಿ ನೀಡುತ್ತಾ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ ಎಂದರು.

ಮಾರ್ಚ್ 15ರಿಂದ 20ರವರೆಗೆ ನಡೆಯುವ ಆರು ದಿನಗಳ ಧಾರ್ಮಿಕ ಉತ್ಸವದಲ್ಲಿ ಪ್ರತಿದಿನವೂ ಭಕ್ತರಿಗೆ ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಈ ಪವಿತ್ರ ಕಾರ್ಯಕ್ರಮದಲ್ಲಿ ಊರು-ಪರವೂರ ಸಮಸ್ತ ಭಕ್ತರು ಸಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮೊತ್ತೇಸರರಾದ ಎ. ಮಂಜುನಾಥ ಭಂಡಾರಿ ಶೆಡ್ಡೆ ಹಾಗೂ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಶೆಡ್ಡೆ ಮಂಜುನಾಥ ಭಂಡಾರಿ, ಮಾಲಾಡಿ ಅಜಿತ್ ಕುಮಾರ್ ರೈ, ಭುಜಂಗ ಶೆಟ್ಟಿ, ರಾಜೀವ ಆಳ್ವಾ, ರಮನಾಥ ಅತ್ತಾರ್, ದೇವದಾಸ್ ನಾಯಕ್, ಆಶಾಜ್ಯೋತಿ ರೈ, ದಿವಾಕರ್ ಸಾಮಾನಿ ಮತ್ತು ವಿಷ್ಣುಮೂರ್ತಿ ಉಪಸ್ಥಿತರಿದ್ದರು.

Post a Comment

Previous Post Next Post