ಅದ್ಯಪಾಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ವಿತರಣೆಯ ರೂವಾರಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮಳಿಗೆ ವ್ಯವಸ್ಥಾಪಕ ಶಿವಪ್ರಸಾದ್ ಪಿ.ಅದ್ಯಪಾಡಿ ಮಾತನಾಡಿ, ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಇರಬಾರದು, ನಾವು ಕೂಡ ಸರಕಾರಿ ಶಾಲೆಯಲ್ಲೇ ಕಲಿತವರು. ಈಗ ಆಂಗ್ಲ ಮಾಧ್ಯಮದಲ್ಲೂ ಸರಕಾರಿ ಶಾಲೆಗಳಲ್ಲಿ ತರಗತಿಗಳು ಇರುವುದರಿಂದ ಇನ್ನಷ್ಟು ಪ್ರಯೋಜನಕಾರಿಯಾಗಿದೆ. ಹಾಗಾಗಿ ಎಲ್ಲರೂ ಸರಕಾರಿ ಶಾಲೆಗಳ ಬಗ್ಗೆ ಸಮಾಜದಲ್ಲಿ ಉತ್ತಮ ಚಿತ್ರಣ ರೂಪಿಸುವ ಕಾರ್ಯ ಮಾಡಬೇಕು ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಬಂಗೇರ ಮಾತನಾಡಿ, ಶಾಲೆಯನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಎಲ್ಲರೂ ಅಭಿಪ್ರಾಯ ಬೇಧಗಳನ್ನು ಬದಿಗೆ ಸರಿಸಿ ಒಟ್ಟುಗೂಡಿ ಸಹಕರಿಸಬೇಕು ಎಂದು ಕರೆ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಜೀವನ್ ಮಲ್ಲಿ, ಶಿವರಾಮ್ ಕುಲಾಲ್, ಮಾಲತಿ, ದಾನಿಗಳಾದ ಮೋಹನ್ ದಾಸ್, ಹಮೀದ್, ಕೃಷ್ಣ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ವೃಂದಾವತಿ ಸ್ವಾಗತಿಸಿದರು. ಶಿಕ್ಷಕ ಸಂಜೀವ ಬಂಗಿ ನಿರೂಪಿಸಿ ವಂದಿಸಿದರು.
Tags
ಮಂಗಳೂರು