Top News

ಮೂಡುಬಿದರೆ ಇನ್ಸ್ಪೆಕ್ಟರ್ ಸಂದೇಶ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ

ಬೆಂಗಳೂರು : ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಹೆಚ್ಚಿನ ಸಮಗ್ರ ತನಿಖೆ ಅಗತ್ಯವೆಂದು ಕಂಡು ಸಿಐಡಿಗೆ ಪ್ರಕರಣ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಇನ್‌ಸ್ಪೆಕ್ಟರ್ ವಿರುದ್ಧ ಆರೋಪಗಳು ಹೊರಬಂದ ತಕ್ಷಣವೇ ಅವರನ್ನು ಅಮಾನತು ಮಾಡಲಾಗಿದ್ದು, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತನಿಖೆಯ ನಂತರ ಸತ್ಯಾಂಶ ಹೊರಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ಇನ್ನೂ ಎಷ್ಟು ಮಂದಿ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬರಬಹುದು. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳಲು ಸಿಐಡಿ ತನಿಖೆ ಅಗತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಣವಾನಂದ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಎಐಸಿಸಿ ತನ್ನದೇ ಆದ ವರದಿ ಆಧರಿಸಿ ತೀರ್ಮಾನಗಳನ್ನು ಕೈಗೊಳ್ಳುತ್ತದೆ. ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳುವ ಪ್ರಕ್ರಿಯೆ ಬೇರೆ ಇದ್ದರೂ, ಅಂತಿಮ ನಿರ್ಧಾರಗಳು ಸಂಸ್ಥೆಯ ವರದಿ ಆಧಾರದಲ್ಲೇ ಇರುತ್ತವೆ ಎಂದು ಹೇಳಿದರು.

Post a Comment

Previous Post Next Post