Top News

ಮಂಗಳೂರು ಸಿಸಿಬಿ ಕಾರ್ಯಾಚರಣೆ: ಎಂಡಿಎಂಎ ಜಾಲ ಬಯಲು – 3 ಮಂದಿ ಬಂಧನ, ಲಕ್ಷಾಂತರ ಮೌಲ್ಯದ ವಸ್ತು ವಶ

ಮಂಗಳೂರು: ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂಪವೆಲ್–ಎಕ್ಕೂರು ಪ್ರದೇಶದಲ್ಲಿ ಆಟೋ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಪೊಲೀಸರು ಮಾರ್ಚ್ 22, 2026ರಂದು ಕಾರ್ಯಾಚರಣೆ ನಡೆಸಿದರು. ಈ ವೇಳೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾವನ್ನು ಪತ್ತೆಹಚ್ಚಿ ಮೂವರನ್ನು ವಶಕ್ಕೆ ಪಡೆದರು.

ಬಂಧಿತರನ್ನು ಹೈದರ್ ಅಲಿ (53), ಮೊಹಮ್ಮದ್ ಸಜಾದ್ (29) ಮತ್ತು ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ.
ಆರೋಪಿಗಳ ವಶದಿಂದ ಸುಮಾರು ರೂ.2.50 ಲಕ್ಷ ಮೌಲ್ಯದ 26 ಗ್ರಾಂ ಎಂಡಿಎಂಎ, ರೂ.37,000 ನಗದು, 5 ಮೊಬೈಲ್ ಫೋನ್‌ಗಳು, ತೂಕಮಾಪನ ಯಂತ್ರ ಹಾಗೂ KA-19-AC-2245 ನಂಬರಿನ ಆಟೋ ರಿಕ್ಷಾ ಸೇರಿ ಒಟ್ಟು ರೂ.4,37,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಮುಖ ಆರೋಪಿ ಹೈದರ್ ಅಲಿ ವಿರುದ್ಧ ಈ ಹಿಂದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ, 2024ರಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಉಳ್ಳಾಲ ಠಾಣೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Post a Comment

Previous Post Next Post