ಮಂಗಳೂರು: ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ನಡೆದ ದೈವನರ್ತನ ಸೇವೆಗೆ ಸಂಬಂಧಿಸಿದಂತೆ ಉದ್ಭವಿಸಿದ್ದ ವಿವಾದಕ್ಕೆ ಸ್ಪಷ್ಟನೆ ಸಿಕ್ಕಿದೆ. ನರ್ತನ ಸೇವೆ ಸಲ್ಲಿಸಿದ ಸುಶಾಂತ್ ಬಂಗೇರ ಕ್ರೈಸ್ತರಲ್ಲ, ಪಂಬದ ಸಮುದಾಯಕ್ಕೆ ಸೇರಿದ ಹಿಂದೂ ಎಂಬುದಾಗಿ ದೈವನರ್ತಕ ಸೂರಜ್ ಚಿಪ್ಪಾರು ಸುದ್ದಿಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ತಿಳಿಸಿದ್ದಾರೆ.
ಕಳೆದ ಮಾರ್ಚ್ 13ರಂದು ಡಾ. ರತಿ ಅವರು ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸುಶಾಂತ್ ಬಂಗೇರ ಅವರ ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ತಮ್ಮ ಬಳಿ ಇದ್ದು, ಅವರು ಹಿಂದೂ ಸಂಪ್ರದಾಯದಂತೆ ಬೆಳೆದ ಪಂಬದ ಸಮುದಾಯದ ಸದಸ್ಯರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಾತನಾಡಿದ ಗಣೇಶ್ ಪಂಬದ, ಪಂಬದ ಸಮುದಾಯದೊಳಗಿನ ಮದುವೆ ಹಾಗೂ ಧರ್ಮ ಪರಿವರ್ತನೆ ವಿಚಾರದಲ್ಲಿ ಮಹಿಳೆಯರನ್ನು ದೂಷಿಸುವುದು ಅನ್ಯಾಯ. ಕ್ರಿಶ್ಚಿಯನ್ ಮಹಿಳೆ ಹಿಂದೂ ಸಂಪ್ರದಾಯವನ್ನು ಅಳವಡಿಸಿಕೊಂಡ ಬಳಿಕ, ಸಮುದಾಯದ ನಿಯಮಗಳನ್ನು ಪಾಲಿಸಿಕೊಂಡು ಬಂದಿರುವುದು ಸತ್ಯ ಎಂದು ಹೇಳಿದರು.
ಸುಶಾಂತ್ ಅವರು ಹಿಂದೂ ಸಂಪ್ರದಾಯದಂತೆ ಹುಟ್ಟಿ ಬೆಳೆದಿದ್ದು, ಕಾನೂನು ಪ್ರಕಾರ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಇಲ್ಲಿಯವರೆಗೆ ದೈವಾರಾಧನೆಗೆ ಯಾವುದೇ ಅಪಚಾರವಾಗಿಲ್ಲ. ಬೋಳೂರಿನ ದೈವಸ್ಥಾನದಲ್ಲಿ ನಡೆದ ನರ್ತನ ಸೇವೆ ಭಕ್ತಿಯಿಂದ, ದೈವೀ ಅನುಮತಿಯಂತೆ ನಿರ್ವಿಘ್ನವಾಗಿ ನಡೆದಿದ್ದು, ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಹೇಳಿದರು. ತಾವು ಕಳೆದ 31 ವರ್ಷಗಳಿಂದ ವಿವಿಧ ಮಾಗಣೆಗಳಲ್ಲಿ ದೈವನರ್ತನ ಸೇವೆ ಸಲ್ಲಿಸುತ್ತಿದ್ದು, ಮುಂದೆಯೂ ಭಕ್ತರ ಆಹ್ವಾನಕ್ಕೆ ಸ್ಪಂದಿಸುವುದಾಗಿ ಹೇಳಿದರು.
ಇದರಿಂದ ಮನನೊಂದು ಮಾತನಾಡಿದ ಸುಶಾಂತ್ ಬಂಗೇರ, “ನನ್ನನ್ನು ಕ್ರೈಸ್ತ ಎಂದು ತಪ್ಪಾಗಿ ಆರೋಪಿಸಿ ಅವಮಾನ ಮಾಡಿದ್ದಾರೆ. ಇದರಿಂದ ನನ್ನ ಭವಿಷ್ಯಕ್ಕೂ ಧಕ್ಕೆ ಉಂಟಾಗಿದೆ. ಸಂಬಂಧಪಟ್ಟವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು, ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment