Top News

ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸಿಕ್ ಪವರ್‌ಲಿಪ್ಟಿಂಗ್ ಚಾಂಪಿಯನ್‌ಶಿಪ್: ಮಾರ್ಚ್ 24ರಿಂದ ಆರಂಭ

ಮಂಗಳೂರು: ಕರ್ನಾಟಕ ಪವರ್‌ಲಿಪ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಹಾಗೂ ಕಶಾರ್ಪ್ ಫಿಟ್ನೆಸ್ ವತಿಯಿಂದ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸಿಕ್ ಪವರ್‌ಲಿಪ್ಟಿಂಗ್ ಚಾಂಪಿಯನ್‌ಶಿಪ್ 2026ರ ಮಾರ್ಚ್ 24ರಿಂದ 28ರವರೆಗೆ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಲಿದೆ ಎಂದು ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ತಿಳಿಸಿದ್ದಾರೆ.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ದಿನಗಳ ಈ ಮಹತ್ವದ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಪವರ್‌ಲಿಪ್ಟರ್‌ಗಳು ಭಾಗವಹಿಸಲಿದ್ದಾರೆ ಎಂದರು. 

ಸ್ಪರ್ಧೆಯಲ್ಲಿ ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್ ವಿಭಾಗಗಳಲ್ಲಿ ಕ್ರೀಡಾಪಟುಗಳು ತಮ್ಮ ಶಕ್ತಿ ಹಾಗೂ ತಂತ್ರಗಳನ್ನು ಪ್ರದರ್ಶಿಸಲಿದ್ದಾರೆ.
ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭವು ಮಾರ್ಚ್ 24ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಮಂಗಳೂರು ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವಿವಿಧ ಗಣ್ಯರು, ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಾಯೋಜಕರು ಉಪಸ್ಥಿತರಿರಲಿದ್ದಾರೆ.

ಈ ಸ್ಪರ್ಧೆಗೆ ವಿಶೇಷ ಮಹತ್ವವಿದ್ದು, ಚಿನ್ನದ ಪದಕ ವಿಜೇತರು ಜೂನ್‌ನಲ್ಲಿ ಲಿಥುವೇನಿಯಾದಲ್ಲಿ ನಡೆಯಲಿರುವ ವಿಶ್ವ ಪವರ್‌ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯಲಿದ್ದಾರೆ. ಹೀಗಾಗಿ ದೇಶದ ಶ್ರೇಷ್ಠ ಪವರ್‌ಲಿಪ್ಟರ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ತೀವ್ರ ಸ್ಪರ್ಧಾತ್ಮಕ ವಾತಾವರಣ ನಿರೀಕ್ಷಿಸಲಾಗಿದೆ.

290 ಕ್ರೀಡಾಪಟುಗಳು ನಾನಾ ರಾಜ್ಯಗಳಿಂದ ಭಾಗವಹಿಸಲಿದ್ದು, ಎಂಟು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ.ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ಸ್ಪರ್ಧಾ ಸಾಧನಗಳು, ಅನುಭವಸಂಪನ್ನ ತಾಂತ್ರಿಕ ಅಧಿಕಾರಿಗಳು, ಡೋಪಿಂಗ್ ನಿಯಂತ್ರಣ ಕ್ರಮಗಳು ಸೇರಿದಂತೆ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಪವರ್‌ಲಿಪ್ಟಿಂಗ್ ಕ್ರೀಡೆಯನ್ನು ಉತ್ತೇಜಿಸುವುದರ ಜೊತೆಗೆ ಯುವಕರಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸಲು ಮತ್ತು ಭಾರತದಲ್ಲಿ ಕ್ರೀಡೆಯ ಮಟ್ಟವನ್ನು ವಿಸ್ತರಿಸಲು ಈ ಚಾಂಪಿಯನ್‌ಶಿಪ್ ಪ್ರಮುಖ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಶಾರ್ಪ್ ಫಿಟ್ನೆಸ್‌ನ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್, ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಹಾಗೂ ಕರ್ನಾಟಕ ಪವರ್ ಲಿಫ್ಟಿಂಗ್ ಕೋಶಾಧಿಕಾರಿ ಜಯರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.

Post a Comment

Previous Post Next Post