ಕದ್ರಿ ಪಾರ್ಕ್‌ನ ಬೀದಿಬದಿ ವ್ಯಾಪಾರಿಗಳ ತೆರವು ; ಪಾಲಿಕೆ ಕ್ರಮವನ್ನು ಖಂಡಿಸಿ ಸಿಐಟಿಯು ಪ್ರತಿಭಟನೆ

ಮಂಗಳೂರು : ಕದ್ರಿ ಪಾರ್ಕ್ ಬಳಿ ಹಲವು ವರ್ಷಗಳಿಂದ ಬೀದಿ ವ್ಯಾಪಾರ ನಡೆಸುತ್ತಿದ್ದ ಮತ್ತು ಮಹಾನಗರ ಪಾಲಿಕೆಯ ಅಧಿಕೃತ ಐಡಿ ಕಾರ್ಡ್ ಹೊಂದಿರುವ ವ್ಯಾಪಾರಿಗಳನ್ನು ಯಾವುದೇ ನೋಟೀಸ್ ನೀಡದೆ ತೆರವುಗೊಳಿಸಿರುವ ನಗರ ಪಾಲಿಕೆಯ ಕ್ರಮದ ವಿರುದ್ಧ ಇಂದು ಮಹಾನಗರ ಪಾಲಿಕೆ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕದ್ರಿ ಪಾರ್ಕ್‌ಗೆ ಬರುವ ವಿಹಾರಿಗಳಿಗೆ ಪಾನೀಯ, ತಿಂಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಬೀದಿ ವ್ಯಾಪಾರಿಗಳ ಮೇಲೆ ಪಾಲಿಕೆ ಅಧಿಕಾರಿಗಳು ‘ಕಾನೂನು ಬಾಹಿರ ರೀತಿಯಲ್ಲಿ’ ಧಾಳಿ ನಡೆಸಿದ್ದಾರೆಂದು ಖಂಡಿಸಿದರು.

“ಬಡ ಬೀದಿ ವ್ಯಾಪಾರಿಗಳನ್ನು ಅಪರಾಧಿಗಳಂತೆ ಬಿಂಬಿಸಿ ನಡೆಯುತ್ತಿರುವ ದೌರ್ಜನ್ಯ ಸಹನೀಯವಲ್ಲ. ತೆರವು ಕ್ರಮ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು.

ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು, “ಕದ್ರಿ ಪಾರ್ಕ್‌ನಲ್ಲಿ 30 ವರ್ಷಕ್ಕೂ ಹೆಚ್ಚು ಕಾಲದಿಂದ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಿಗಳ ಮೇಲೆ ನಗರ ಪಾಲಿಕೆ ಏಕಾಏಕಿ ಧಾಳಿ ನಡೆಸಿ ಅವರ ಗಾಡಿ, ಸರಕುಗಳನ್ನು ವಶಪಡಿಸಿಕೊಂಡಿರುವುದು ಜೀವನೋಪಾಯದ ಹಕ್ಕಿನ ಉಲ್ಲಂಘನೆ,” ಎಂದು ಆರೋಪಿಸಿದರು.

ಅವರ ಮಾಹಿತಿ ಪ್ರಕಾರ, ವ್ಯಾಪಾರಿಗಳು ಪಾಲಿಕೆ ನೀಡಿರುವ ಐಡಿ ಕಾರ್ಡ್, ವ್ಯಾಪಾರ ಪರವಾನಗಿ, ಆಹಾರ ಸುರಕ್ಷತಾ ಪ್ರಮಾಣಪತ್ರಗಳನ್ನು ಹೊಂದಿದ್ದರೂ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವುದು ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆ.

“ಮಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣಾ ಸಮಿತಿ ಹಾಗೂ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗಳು ಅಸ್ತಿತ್ವದಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕಾರ್ಯಾಚರಣೆ ನಡೆಸಿರುವುದು ಕಾನೂನುಬಾಹಿರ.” ಇದೆ ವೇಳೆ, ಏರ್‌ಪೋರ್ಟ್ ರಸ್ತೆಯಲ್ಲಿ ವ್ಯಾಪಾರ ನಿಷೇಧ ಆದೇಶವನ್ನೂ ಅವರು ಆಕ್ಷೇಪಿಸಿದರು.

“ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧ ಹೇರಿರುವುದು ಬಡ ವ್ಯಾಪಾರಿಗಳ ಬದುಕು ಸಂಕಷ್ಟಗೊಳಿಸಿದೆ. ಪ್ರತಿದಿನ ಧಾಳಿಯ ಭೀತಿಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ,” ಎಂದು ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಹರೇಕಳ, ಸಂತೋಷ್ ಆರ್.ಎಸ್., ಮುಜಾಫರ್ ಅಹ್ಮದ್, ಹಂಝ ಮೊಹಮ್ಮದ್, ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ಸ್ಟ್ಯಾನಿ ಡಿಸೋಜಾ, ವಿಶ್ವನಾಥ್ ಕದ್ರಿ ಹಾಗೂ ಹಲವಾರು ಬೀದಿ ವ್ಯಾಪಾರಿಗಳು ಭಾಗವಹಿಸಿದ್ದರು.

ಪ್ರತಿಭಟನಾಕಾರರ ಮನವಿಯನ್ನು ಪಾಲಿಕೆಯ ಅಧಿಕಾರಿಗಳಾದ ಮಾಲಿನಿ ಮತ್ತು ಚಿತ್ತರಂಜನ್ ಸ್ವೀಕರಿಸಿದರು.



ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳು 1. ಕದ್ರಿ ಪಾರ್ಕ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಬೀದಿ ವ್ಯಾಪಾರಿಗಳಿಗೆ ವಹಿವಾಟು ಮುಂದುವರಿಸಲು ತಕ್ಷಣ ಅನುಮತಿ ನೀಡಬೇಕು.

2. ಕದ್ರಿ ಪಾರ್ಕ್ ಮುಖ್ಯ ದ್ವಾರದ ಎದುರುಗಡೆ ಆಹಾರ ಮಾರಾಟಗಾರರಿಗೆ ಪ್ರತ್ಯೇಕ ಆಹಾರ ವಲಯ ನಿರ್ಮಿಸಬೇಕು.

3. ಪಟ್ಟಣ ವ್ಯಾಪಾರ ಸಮಿತಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ರಚನೆಯಾಗುವವರೆಗೆ ನಗರ ವ್ಯಾಪ್ತಿಯಲ್ಲಿ ಯಾವುದೇ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಬಾರದು.

4. ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಯನ್ನು ತಕ್ಷಣ ರಚಿಸಬೇಕು.

5. ವಶಪಡಿಸಿಕೊಳ್ಳುವ ಸರಕು, ಗಾಡಿಗಳಿಗೆ ಹಾನಿ ಮಾಡದೆ ಮಹಜರು ರಚಿಸಿ ಹಿಂದಿರುಗಿಸಬೇಕು.

6. ಏರ್‌ಪೋರ್ಟ್ ರಸ್ತೆಯ ಬೀದಿ ವ್ಯಾಪಾರ ನಿಷೇಧ ಆದೇಶವನ್ನು ತಕ್ಷಣ ಹಿಂಪಡೆಯಬೇಕು.

Post a Comment

Previous Post Next Post