ನಿರಂತರ ಮನವಿ ನೀಡಿದರೂ ಕಣ್ಮುಚ್ಚಿ ಕುಳಿತ ಕಂದಾವರ ಗ್ರಾಮ ಪಂಚಾಯತಿ ; ಬಾಲಕನ ಮೇಲೆ ದಾಳಿ ಘಟನೆ ಬಳಿಕ 17 ಶ್ವಾನಗಳನ್ನು ಸೆರೆ ಹಿಡಿದ ಆಡಳಿತ !

ಮಂಗಳೂರು : ಮಂಗಳೂರು ನಗರ ಹೊರವಲಯದ ಕಂದಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಶ್ವಾನದ ದಾಳಿಗೆ ಬಾಲಕನೊಬ್ಬ ತುತ್ತಾದ ಬಳಿಕ ಸ್ಥಳೀಯರ ಆಕ್ರೋಶ ಹಾಗೂ ನಿರಂತರ ಒತ್ತಡದ ಬಳಿಕ ಎಚ್ಚೆತ್ತುಕೊಂಡ ಆಡಳಿತ ಕೊನೆಗೂ 17 ಶ್ವಾನಗಳನ್ನು ಸೆರೆ ಹಿಡಿದಿದ್ದಾರೆ.
ಸ್ಥಳೀಯ ಮುಖಂಡರಾದ ಅಬ್ದುಲ್ ಹಮೀದ್ ಅವರ ನೇತೃತ್ವದಲ್ಲಿ ಕಳೆದ ಫೆಬ್ರವರಿ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಸೇರಿದಂತೆ ಹಲವಾರು ಬಾರಿ ಪಂಚಾಯಿತಿಗೆ ಮನವಿಯನ್ನು ನೀಡಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದರು. 
ಬುಧವಾರ ಅಹಿಲ್ ಎನ್ನುವ ಹುಡುಗನಿಗೆ ಶ್ವಾನ ದಾಳಿ ಮಾಡಿದ ಬಳಿಕ ಈಗ ಶ್ವಾನಗಳನ್ನು ಸೆರೆ ಹಿಡಿಯುವ ಕೆಲಸ ನಡೆದಿದೆ. ಪಂಚಾಯಿತಿ ಹಾಗೂ ಆಡಳಿತದ ನಿರ್ಲಕ್ಷ್ಯದಿಂದಾಗಿಯೇ ಈ ಅನಾಹುತ ನಡೆದಿದೆ ಹಾಗಾಗಿ ಗಾಯಾಳು ಬಾಲಕನ ಆಸ್ಪತ್ರೆ ವೆಚ್ಚವನ್ನು ಪಂಚಾಯತ್ ಭರಿಸಬೇಕು ಹಾಗೂ ಪಂಚಾಯಿತಿ ಅಧಿಕಾರಿಗಳು ಬಾಲಕನ ಆರೋಗ್ಯ ವಿಚಾರದ ಕುರಿತು ಗಮನ ಹರಿಸಬೇಕು ಎನ್ನುವ ಒತ್ತಾಯವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಬಾಲಕನಿಗೆ ನಾಯಿ ಕಚ್ಚಿದ ಬಳಿಕ ಈಗ ಶ್ವಾನಗಳನ್ನು ಸೆರೆ ಹಿಡಿಯಲಾಗಿದೆ ಇನ್ನೂ ಅಪಾಯಕಾರಿ ನಾಯಿಗಳು ಇಲ್ಲಿವೆ, ಇವುಗಳ ಸಂತಾನ ಹರಣ ಪ್ರಕ್ರಿಯೆ ಅಥವಾ ಸೆರೆ ಹಿಡಿಯುವ ಕೆಲಸ ಆಗಬೇಕು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದೇ ಇದ್ದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಊರಿನ ನಾಗರಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.

Post a Comment

Previous Post Next Post