ಮಂಗಳೂರು : ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡೀಪಾರು ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ. ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಗಡೀಪಾರು ಆದೇಶದಲ್ಲಿ ಸೂಕ್ತ ಕಾರಣ ಮತ್ತು ಕಾನೂನುಬದ್ಧ ಸೆಕ್ಷನ್ಗಳ ಅಭಾವ ಕಂಡುಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ನೇತೃತ್ವದ ಏಕಸದಸ್ಯ ಪೀಠವು, ಗಡೀಪಾರು ಅಗತ್ಯವಿದ್ದರೆ ಕಾನೂನು ಪ್ರಕಾರ ಹೊಸದಾಗಿ ವಿಚಾರಣೆ ನಡೆಸಿ 15 ದಿನಗಳೊಳಗೆ ಮರು ಆದೇಶ ನೀಡಲು ಪುತ್ತೂರು ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದೆ.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಕಳೆದ ಸೆಪ್ಟೆಂಬರ್ 20ರಂದು ಒಂದು ವರ್ಷ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಲು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ನೀಡಿದ್ದರು. ಬೆಳ್ತಂಗಡಿ ಪೊಲೀಸರ ವರದಿಯನ್ನು ಆಧಾರವಾಗಿ ತೆಗೆದುಕೊಂಡು ಸುಮಾರು 32 ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಆತಂಕವಿದೆಯೆಂದು ಗಡಿಪಾರು ಜಾರಿಗೊಳಿಸಲಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಗಡಿಪಾರು ಕ್ರಮದಲ್ಲಿ ಕಾನೂನು ಸಮ್ಮತ ಪ್ರಕ್ರಿಯೆ ಪಾಲಿಸದೇ ಇದ್ದ ಬಗ್ಗೆ ಪೀಠ ಆಕ್ಷೇಪ ವ್ಯಕ್ತಪಡಿಸಿ ಆದೇಶವನ್ನು ರದ್ದುಗೊಳಿಸಿದೆ.
ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಪರ ಹೋರಾಟಗಾರರಿಗೆ ಹೈಕೋರ್ಟ್ ತೀರ್ಪು ದೊಡ್ಡ ರಿಲೀಫ್ ನೀಡಿದೆ.
Post a Comment