ಮಂಗಳೂರು: ಜೆಪ್ಪಿಮೊಗರು ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಮೂಲದ 26 ವರ್ಷದ ಯುವಕನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಆ.4ರಂದು ಮನೆಯವರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗವನ್ನು ಆಯುಧದಿಂದ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ 14 ಗ್ರಾಂ ಚಿನ್ನದ ಸರ, ತಲಾ 2 ಗ್ರಾಂ ತೂಕದ ಎರಡು ಉಂಗುರಗಳು ಹಾಗೂ ₹25 ಸಾವಿರ ನಗದನ್ನು ಕಳವು ಮಾಡಿದ್ದರು. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಆ.11ರಂದು ತಲಪಾಡಿ ಬಸ್ ನಿಲ್ದಾಣದ ಬಳಿ ಆರೋಪಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಮಧನ ಸಕಹರಿ ನರಳೆ (26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ನರಳೆವಾಡಿ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಕಳವು ಮಾಡಲಾದ ಸೊತ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment