ಮೈಸೂರು: ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿ, ಸಂಸ್ಕೃತಿ ಹಾಗೂ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಈ ಮೂರು ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಸಾಧನೆ ಮಾಡಿ ಸಮಾಜದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಹೇಳಿದರು.
ನಗರದ ಹೂಟಗಳ್ಳಿಯ ದಕ್ಷ ಕಾಲೇಜಿನ ಸಭಾಂಗಣದಲ್ಲಿ ಅದಮ್ಯ ರಂಗಶಾಲೆ ವತಿಯಿಂದ ಆಯೋಜಿಸಿದ್ದ 'ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಗಣ್ಯ ಸಾಧಕರಿಗೆ ಅಭಿನಂದನ ಸಮಾರಂಭ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೃಜನಶೀಲತೆ ಹೊಂದಿರುವವರು ಸಾಧಕರಾಗುತ್ತಾರೆ ಎಂಬುದಕ್ಕೆ ಕುವೆಂಪು, ದೇಜಗೌ ಹಾಗೂ ಹಾಮಾನಾ ಅವರು ಶ್ರೇಷ್ಠ ಮಾದರಿಗಳಾಗಿದ್ದಾರೆ. ವಿದ್ಯಾರ್ಥಿ, ಶಿಕ್ಷಕ, ಕವಿ, ಕಲಾವಿದ ಅಥವಾ ಎಂಜಿನಿಯರ್ ಆಗಬೇಕಾದರೂ ಸೃಜನಶೀಲತೆಯ ಗುಣ ಅತ್ಯಂತ ಮುಖ್ಯ. ಅದು ವ್ಯಕ್ತಿಯನ್ನು ಸಮಾಜಮುಖಿಯಾಗಿ ಬದುಕಲು ಸಹಕಾರಿಯಾಗುತ್ತದೆ ಎಂದರು.
ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಬದುಕಿಗೆ ಅನಿವಾರ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜದ ಪ್ರಗತಿಗೆ ನೆರವಾಗಿದ್ದರೂ, ಅದರ ಅಡಿಯಾಳಾಗಿ ನಮ್ಮ ಮೂಲ ಗ್ರಾಮೀಣ ಸಂಸ್ಕೃತಿಯನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.
ಇಂದಿನ ಮಕ್ಕಳು ಹಾಗೂ ಯುವಜನರು ತಂತ್ರಜ್ಞಾನದ ದಾಸರಾಗುತ್ತಿದ್ದು, ಗ್ರಾಮೀಣ ಸಂಸ್ಕೃತಿ ಮತ್ತು ಜನರಿಂದ ದೂರವಾಗುತ್ತಿದ್ದಾರೆ. ಹಳ್ಳಿಯ ಅಜ್ಜ-ಅಜ್ಜಿಯರ ಸಂಪರ್ಕ ಹಾಗೂ ಸಂಬಂಧ ಕಡಿಮೆಯಾಗುತ್ತಿರುವುದು ಅವರಲ್ಲಿ ಪ್ರಜ್ಞಾವಂತಿಕೆ ಕುಸಿಯಲು ಕಾರಣವಾಗುತ್ತಿದೆ ಎಂದು ವಿಷಾದಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಶಿಕ್ಷಣವು ಕೇವಲ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೆ ದೈಹಿಕ, ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅಂತಃರಂಗದ ಸಂಸ್ಕಾರವನ್ನು ಬೆಳೆಸುತ್ತದೆ. ಪಠ್ಯಾಧಾರಿತ ರಂಗರೂಪ ಪ್ರದರ್ಶನವು ವ್ಯಕ್ತಿಯ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಲು ಪೂರಕವಾಗಿದೆ ಎಂದರು.
ಕನ್ನಡ ಭಾಷೆ ತನ್ನದೇ ಆದ ಜೀವಶಕ್ತಿಯನ್ನು ಹೊಂದಿದ್ದು, ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಸಾಹಿತ್ಯದಲ್ಲಿರುವ ಮಾನವೀಯ ಗುಣಗಳನ್ನು ಭಾಷಾ ಪಠ್ಯವಸ್ತು ಬಿಂಬಿಸುತ್ತದೆ. ಅದನ್ನು ರಂಗರೂಪಕ್ಕೆ ಇಳಿಸಿದಾಗ ಮತ್ತಷ್ಟು ಪರಿಣಾಮಕಾರಿಯಾಗಿ ಮನದಟ್ಟಾಗುತ್ತದೆ. ಚಲನಚಿತ್ರಗಳಿಗಿಂತ ರಂಗರೂಪಕಗಳಲ್ಲಿ ಹೆಚ್ಚಿನ ಜೀವಂತಿಕೆ ಇರುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಪಿ. ಜಯಚಂದ್ರರಾಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ. ಲಿಂಗರಾಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ ಪುರಸ್ಕೃತ ಸಾಹಿತಿ ಟಿ. ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ಅಭಿಷೇಕ್, ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಸಿ.ಎಸ್. ರಾಘವೇಂದ್ರ, ನಾಗೇಶ್ ಕಾವ್ಯಪ್ರಿಯ, ಜಿ. ರವೀಂದ್ರ ಕುಮಾರ್ ಹಾಗೂ ಕವಯತ್ರಿ ಸುಪ್ರಿಯಾ ಶಿವಣ್ಣ ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕನ್ನಡ ಭಾಷಾ ಪಠ್ಯಾಧಾರಿತ ರಂಗರೂಪ ಪ್ರದರ್ಶನ ನಡೆಯಿತು.
Post a Comment