ಮಂಗಳೂರು : ನಂತೂರು ಬೈಕ್ ಢಿಕ್ಕಿ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಮೋಹನ್ ಚಂದರ್ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಮಂಗಳೂರು: ಕಳೆದ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ತಾರಾಯಿತೋಟ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ. ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಶನಿವಾರ ರಾತ್ರಿ ಸುಮಾರು 8.30ರ ವೇಳೆ ಗುರುಪುರದಿಂದ ಜಪ್ಪಿನಮೊಗರಿನತ್ತ ತನ್ನ ಬಾಡಿಗೆ ಮನೆಗೆ ತೆರಳುತ್ತಿದ್ದ ವೇಳೆ ಎಫ್‌ಜಿ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದಾನೆ. ಓವರ್‌ಟೇಕ್ ಮಾಡುವ ವೇಳೆ ತನ್ನ ಮಾರ್ಗದಲ್ಲಿ ಸಾಗುತ್ತಿದ್ದ ಮೋಹನ್ ಅವರ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿದ ಬೈಕ್ ಮೈನ್ಸ್ ಸಾಗಾಟದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಗೋಪಾಲಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತದ ಪರಿಣಾಮವಾಗಿ ರಸ್ತೆಗೆ ಎಸೆಯಲ್ಪಟ್ಟ ಮೋಹನ್ ಚಂದರ್ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಟೆಂಪೋ ಚಾಲಕ ಗಂಗಾಧರ ಅಂಬ್ಲಮೊಗರು ಸಾರ್ವಜನಿಕರ ನೆರವಿನಿಂದ ಅವರನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎರಡು ದಿನಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಭೀಕರ ಅಪಘಾತದ ದೃಶ್ಯ ಗಂಗಾಧರ ಅವರು ಚಲಾಯಿಸುತ್ತಿದ್ದ ಗೂಡ್ಸ್ ಟೆಂಪೋವಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿರುವುದು ಘಟನೆಗೆ ಮತ್ತಷ್ಟು ಸ್ಪಷ್ಟತೆ ನೀಡಿದೆ.
ನಾಗುರಿ ನಿವಾಸಿಯಾಗಿದ್ದ ಮೋಹನ್ ಚಂದರ್ ಅವರು ಪದವಿನಂಗಡಿಯಲ್ಲಿ ‘ನವ್ಯ ಸ್ಟುಡಿಯೋ’ ನಡೆಸುತ್ತಿದ್ದು, ವೃತ್ತಿಪರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. 

ಅವರ ಹಿರಿಯ ಪುತ್ರಿಯ ವಿವಾಹ ಮೇ 10ರಂದು ನಿಗದಿಯಾಗಿದ್ದು, ಮನೆಯಲ್ಲಿದ್ದ ಸಂಭ್ರಮದ ವಾತಾವರಣ ಇದೀಗ ದುಃಖದಲ್ಲಿ ಮುಳುಗಿದೆ.
ಮೋಹನ್ ಚಂದರ್ ಅವರು ದಕ್ಷಿಣ ಕನ್ನಡ–ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಅಜೀವ ಸದಸ್ಯರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೈಕ್ ಸವಾರನ ಅಜಾಗರೂಕ ಚಾಲನೆಯಿಂದಾಗಿ ಎರಡು ಕುಟುಂಬಗಳ ಜೀವನವೇ ಕತ್ತಲೆಯಾದಂತಾಗಿದೆ.
Previous Post Next Post