ಮಂಗಳೂರು : ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಗ್ರೀಕ್, ರೋಮ್ ಹಾಗೂ ಸಿಂಧು ನಾಗರಿಕತೆ ಪ್ರಮುಖವಾಗಿವೆ. ಇವುಗಳಲ್ಲಿ ಗ್ರೀಕ್ ಮತ್ತು ರೋಮ್ ನಾಗರಿಕತೆಗಳು ನಾಶವಾದರೂ, ಭಾರತೀಯ ಸಿಂಧು ನಾಗರಿಕತೆ ಮಾತ್ರ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದಕ್ಕೆ ಇಲ್ಲಿನ ಜನರ ಆಚರಣೆ, ನಂಬಿಕೆ, ನಡವಳಿಕೆ ಹಾಗೂ ಸಂಸ್ಕೃತಿಯೇ ಮುಖ್ಯ ಕಾರಣ ಎಂದು ಸಾಹಿತಿ ಹಾಗೂ ಉಪನ್ಯಾಸಕ ಡಾ. ಮಾಧವ ಎಂ.ಕೆ. ಹೇಳಿದರು.
ತುಳುನಾಡಿನ ಹೊಸ ವರ್ಷವೆಂದೇ ಕರೆಯಲ್ಪಡುವ 'ಬಿಸು ಪರ್ಬ'ವನ್ನು ಆಚರಿಸುವ ನಿಟ್ಟಿನಲ್ಲಿ ತುಳು ಕೂಟದ ವತಿಯಿಂದ ಮಂಗಳಾದೇವಿ ದೇವಾಲಯದ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಸು ಪರ್ಬ-2026 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತೀಯ ಹಬ್ಬಗಳಿಗೆ ತನ್ನದೇ ಆದ ಮಹತ್ವ ಹಾಗೂ ಭಕ್ತಿಯಿದೆ. ಜಗತ್ತಿನ ಯಾವುದೇ ಲೆಕ್ಕಾಚಾರ ತಪ್ಪಿದರೂ, ಭಾರತೀಯರ ಪಂಚಾಂಗ ಲೆಕ್ಕಾಚಾರದಲ್ಲಿ ತಪ್ಪು ಕಾಣುವುದಿಲ್ಲ. ಗ್ರಹಣ, ಸಂಕ್ರಮಣ ಮೊದಲಾದವುಗಳು ನಿಖರ ದಿನಾಂಕಗಳಲ್ಲಿ ಸಂಭವಿಸುತ್ತವೆ ಎಂದು ಅವರು ಹೇಳಿದರು. ಬಿಸು ಹಬ್ಬವು ಸಮೃದ್ಧಿಯ ಸಂಕೇತವಾಗಿದ್ದು, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಮಂಜೇಶ್ವರ ದಾಟಿದ ನಂತರ ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಕಂಡುಬರುತ್ತದೆ. ನಿತ್ಯ ನೂತನತೆಯೊಂದಿಗೆ ಹೊಸ ವರ್ಷದ ಸಂದೇಶವನ್ನು ಬಿಸು ಹಬ್ಬ ನೀಡುತ್ತದೆ ಎಂದು ಅವರು ತಿಳಿಸಿದರು.
ಮಂಗಳಾದೇವಿ ದೇವಸ್ಥಾನದ ಮೋಕ್ತೇಸರ ಅರುಣ್ ಐತಾಳ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುಳು ಕೂಟದ ಅಧ್ಯಕ್ಷರಾದ ಹೇಮಾ ದಾಮೋದರ ನಿಸರ್ಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲೋಕೇಶ್ ಭಂಡಾರಿ, ಪ್ರವಾಸೋದ್ಯಮ ಹಾಗೂ ಪರಿಸರ ಅಭಿವೃದ್ಧಿ ಪ್ರಾಧಿಕಾರದ ಶಾಲೆಟ್ ಪಿಂಟೋ ಭಾಗವಹಿಸಿದ್ದರು.
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ನಾಟಕ ಸ್ಪರ್ಧೆ ವಿಜೇತರಿಗೆ ಪ್ರತಿಷ್ಠಿತ 'ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ-2026'ಯನ್ನು ಪ್ರದಾನ ಮಾಡಲಾಯಿತು.
ರಾಜೇಶ್ ಶೆಟ್ಟಿ ದೋಟ (ಕೃತಿ: ಒಂಜಿ ಗುತ್ತುದ ಕಥೆ) ಪ್ರಥಮ, ವಿಲಾಸ್ ಕುಮಾರ್ ನಿಟ್ಟೆ (ಕೃತಿ: ಆಯೆ ಆಣ್ ಮಗೆ) ದ್ವಿತೀಯ, ರಮ್ಯಾ ಬಿಸಿರೋಡ್ (ಕೃತಿ: ಬಾಲೆ ಪ್ರಹ್ಲಾದೆ) ತೃತೀಯ ಬಹುಮಾನ ಪಡೆದುಕೊಂಡರು.
ಪಂಚಾಂಗ ಶ್ರವಣದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ತುಳುಕೂಟದ ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ನಿರೂಪಿಸಿದರು. ಉಪಾಧ್ಯಕ್ಷರಾದ ಜೆ.ವಿ.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ನಾರಾಯಣ ಬಿ.ಡಿ.ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶರಭೇಶ್ವರ ಕಲಾವಿದರು ಕುಡ್ಲ ತಂಡದವರಿಂದ 'ಮುಗ ಪುಂಚ' ಎಂಬ ತುಳು ಜಾನಪದ ನಾಟಕ ಪ್ರದರ್ಶನಗೊಂಡಿತು. ಮೋಹನ್ ಕೆ.ಬೋಳಾರ್ ಅವರ ಸಾಹಿತ್ಯ ಮತ್ತು ನಾಗೇಶ್ ದೇವಾಡಿಗ ಕದ್ರಿ ಅವರ ನಿರ್ದೇಶನದಲ್ಲಿ ಈ ನಾಟಕ ಮೂಡಿಬಂದಿತು.
Tags
ಮಂಗಳೂರು