ಮಡಿಕೇರಿ : ತಡಿಯಂಡಮೋಳ್ ಚಾರಣದಲ್ಲಿ ನಾಪತ್ತೆಯಾಗಿದ್ದ ಐಟಿ ಯುವತಿ ಶರಣ್ಯ ಪತ್ತೆ: ನಾಲ್ಕು ದಿನಗಳ ಶೋಧ ಕಾರ್ಯಾಚರಣೆ ಯಶಸ್ವಿ

ಕೊಡಗು ಜಿಲ್ಲೆಯಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಅವರು ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಮಡಿಕೇರಿ ತಾಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಶರಣ್ಯ, ತಮ್ಮ ತಂಡದಿಂದ ಬೇರ್ಪಟ್ಟ ನಂತರ ದಾರಿ ತಪ್ಪಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತವಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಶೋಧದ ವೇಳೆ ಡ್ರೋನ್, ಶ್ವಾನ ದಳ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ವ್ಯಾಪಕವಾಗಿ ಹುಡುಕಾಟ ಮುಂದುವರಿಸಲಾಗಿತ್ತು. ಆದಾಗ್ಯೂ, ಮೊದಲ ಮೂರು ದಿನಗಳ ಕಾಲ ಯಾವುದೇ ಸುಳಿವು ಸಿಕ್ಕಿರಲಿಲ್ಲದರಿಂದ ಆತಂಕ ಹೆಚ್ಚಾಗಿತ್ತು.

ಚಾರಣದ ವೇಳೆ ದಾರಿ ತಪ್ಪಿದ ಶರಣ್ಯ, ಪಾಳುಬಿದ್ದ ಬಂಗಲೆಯೊಂದರಲ್ಲಿ ಆಶ್ರಯ ಪಡೆದು ನಾಲ್ಕು ದಿನಗಳನ್ನು ಕಳೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರ ಸಹಾಯದಿಂದ ಶೋಧ ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದು, ಇಂದು ಅವರು ಪತ್ತೆಯಾಗಿದ್ದಾರೆ.

ಶರಣ್ಯ ಅವರು ಕಕ್ಕಬ್ಬೆ ಸಮೀಪದ ಕಬ್ಬಿನಕಾಡು ಹೋಂಸ್ಟೇನಲ್ಲಿ ತಂಗಿದ್ದು, ಗುರುವಾರ ಚಾರಣಕ್ಕೆ ತೆರಳಿದ್ದರು. ಇದೀಗ ಅವರು ಪತ್ತೆಯಾಗಿರುವುದರಿಂದ ಕುಟುಂಬದವರು ಮತ್ತು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
Previous Post Next Post