ಮಂಗಳೂರು, ಏಪ್ರಿಲ್ 04: ಕುದ್ರೋಳಿಯ ಶ್ರೀ ಭಗವತಿ ಕ್ಷೇತ್ರದ ದೇವಿಯನ್ನು ಸ್ತುತಿಸುವ ಕನ್ನಡ ಹಾಗೂ ಮಲೆಯಾಳಂ ಭಾಷೆಯ ಭಕ್ತಿಗೀತೆ ‘ಅಮ್ಮ ಭಗವತಿ’ ಶನಿವಾರ ಭವ್ಯವಾಗಿ ಲೋಕಾರ್ಪಣೆಗೊಂಡಿತು.
ನಗರದ ಕುದ್ರೋಳಿಯ ಕೂಟಕ್ಕಳ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಗೀತೆಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, “ಇಂತಹ ಭಕ್ತಿಗೀತೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ನಮ್ಮ ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುವ ಸಾಧನಗಳಾಗಿವೆ. ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವು ಸದಾ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಜನರಲ್ಲಿ ಭಕ್ತಿ ಹಾಗೂ ಒಗ್ಗಟ್ಟು ಬೆಳೆಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
ಇನ್ನು ಮುಂದುವರಿಸಿ, ಕನ್ನಡ ಮತ್ತು ಮಲೆಯಾಳಂ ಎರಡೂ ಭಾಷೆಗಳಲ್ಲಿ ಗೀತೆ ಬಿಡುಗಡೆ ಮಾಡಿರುವುದು ಸಂಸ್ಕೃತಿಗಳ ಸೇತುವೆಯಾಗಿ ಕೆಲಸ ಮಾಡುತ್ತದೆ ಎಂದು ಅವರು ಶ್ಲಾಘಿಸಿದರು. “ಇದು ಭಕ್ತಿ, ಭಾಷೆ ಮತ್ತು ಸಂಸ್ಕೃತಿಯ ಸಮನ್ವಯವನ್ನು ತೋರಿಸುವ ಒಳ್ಳೆಯ ಉದಾಹರಣೆ” ಎಂದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಉಳ್ಳಾಲ ಶ್ರೀ ಚೀರುಂಬ ಭಗವತಿ ಕ್ಷೇತ್ರದ ಆಡಳಿತ ಮೋಕ್ತೇಸರ ಸುರೇಶ್ ಭಟ್ನಗರ, ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಟ್ರಸ್ಟಿ ಶ್ರೀಮತಿ ಉಷಾ ಪ್ರಭಾಕರ್ ಯೆಯ್ಯಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್ ಜಿ., ವಿಜಯ್ ಗುರೂಜಿ ಮಾದುಕೋಡಿ ಹಾಗೂ ಉದ್ಯಮಿ ವೈ.ಬಿ.ಸುಂದರ್ ಉಪಸ್ಥಿತರಿದ್ದರು.
ಭಕ್ತಿಗೀತೆ ಬಿಡುಗಡೆಯ ನಂತರ ಜಿಲ್ಲೆಯ ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮತ್ತು ಟಿ.ವಿ. ಗಿರಿ ಬಳಗದಿಂದ “ಭಕ್ತಿಲಹರಿ” ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂಗೀತ ವೈಭವವು ಪ್ರೇಕ್ಷಕರ ಮನಸೆಳೆದಿತು.
‘ಅಮ್ಮ ಭಗವತಿ’ ಭಕ್ತಿಗೀತೆಯನ್ನು ಸತೀಶ್ ಇರಾ ನಿರ್ಮಿಸಿದ್ದು, ಚಂದ್ರಶೇಖರ್ ಪಾತೂರು ಸಾಹಿತ್ಯ ರಚಿಸಿದ್ದಾರೆ. ಕನ್ನಡ ಆವೃತ್ತಿಗೆ ಟಿ.ವಿ. ಗಿರಿ ಕುರ್ನಾಡು ಗಾಯನ ಮತ್ತು ಸ್ವರ ಸಂಯೋಜನೆ ನೀಡಿದ್ದು, ಮಲೆಯಾಳಂ ಆವೃತ್ತಿಯನ್ನು ರಮೇಶ್ ಚಂದ್ರ ಬೆಂಗಳೂರು ಹಾಡಿದ್ದಾರೆ. ಗುರುರಾಜ್ ಎಂ.ಬಿ. ಅವರು ವಾದ್ಯ ಸಂಯೋಜನೆ ಮತ್ತು ಧ್ವನಿ ಮುದ್ರಣವನ್ನು ಮಂಗಳೂರಿನ ಸಾಯಿರಾಮ್ ಸ್ಟುಡಿಯೋದಲ್ಲಿ ನಿರ್ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಭಗವತಿ ಕ್ಷೇತ್ರದ ಭಕ್ತರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಇರಾ ವಂದಿಸಿದರು.
Tags
ಮಂಗಳೂರು