ಚೈತ್ರದ ಚಿಗುರೊಂದು
ಹಸಿರು ಹಸ್ತಾಕ್ಷರ ಬರೆಯುವ ಹೊತ್ತಿಗೆ
ನಭಗರ್ಭದಿಂದ ಉದುರುತ್ತಿವೆ
ಲೋಹದ ಹಣ್ಣುಗಳು ಬೆಂಕಿ ಚೆಲ್ಲುತ್ತಾ.. !
ಬಾಂಬುಗಳಂತೆ ಅವು
ಸಿಹಿಯಿಲ್ಲ, ಸಾವಿನ ಕಹಿಯನ್ನೇ ತುಂಬಿಕೊಂಡಿವೆ
ಯುಗಾದಿಯ ಹೂರಣ
ಕಾಲದ ಕನ್ನಡಿಯ ಮೇಲೆ
ಯುಗಾಂತ್ಯದ ಚಿತ್ರವೊಂದು
ಕರಿ ಮೋಡದಲಿ ಮೂಡಿ
ನಡುಗುತ್ತಿದೆ ನೆಲದೆದೆಯ ಗೂಡು !!
ಮನುಜನೆದೆಯಿಂದ ಮನುಷ್ಯತ್ವ
ಖಾಲಿಯಾಗುತ್ತಿರುವಾಗ
ಪಂಚಾಂಗದ ಪುಟಗಳ
ಲೆಕ್ಕಾಚಾರ ತಪ್ಪಿದಂತೆ
ಅನಾಚಾರದ ಪರಮಾವಧಿ
ಜಗ ಗೆಲ್ಲುವ ಹುಚ್ಚರ ಅಟ್ಟಹಾಸ
ಸಿಡಿಲಂತೆ ಬಡಿದು
ಅನಾಥ ಕಣ್ಣೀರ ಹನಿಗಳು
ಹರಿದು ಕೆನ್ನೀರ ನದಿಗಳು ಹುಟ್ಟಿವೆ...
ಕೊಂದು ಗೆಲ್ಲುವ ಯುದ್ಧಕ್ಕೆ
ಧಿಕ್ಕಾರವಿರಲಿ
ಹೊಸ ಯುಗದ ಸೂರ್ಯ
ಹೊಗೆಯ ಮುಸುಕ ಸೀಳಿ ಬರಲಿ
ವಿನಾಶಕ್ಕೆ ನಾಂದಿ ಹಾಡುವ ಮೊದಲು
ಆ ಹಣ್ಣುಗಳ ಕಹಿ ಖಾಲಿಯಾಗಿ
ಹೊಸ ಯುಗಕ್ಕೆ ಹಾದಿಯಾಗಲಿ !!!
ಗಣೇಶ್ ಅದ್ಯಪಾಡಿ
Post a Comment