ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದ್ರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮಾರ್ಚ್ 18, 2026 ರಂದು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ ಮುಗಿದ ಬಳಿಕ ರಾಜೇಂದ್ರ ಪೂಜಾರಿ ಮತ್ತು ರಾಜೇಶ್ ಬಲ್ಲಾಳ್ ಅವರ ನೇತೃತ್ವದಲ್ಲಿ ಕೆಲವರು ಅಕ್ರಮವಾಗಿ ಸೇರಿಕೊಂಡು ಕೋಳಿಗಳಿಗೆ ಹರಿತವಾದ ಬಾಳ್ ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಡುತ್ತಾ, ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ನಡೆಸುತ್ತಿದ್ದರು.
ದಾಳಿಯ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಪಣಕ್ಕಿಟ್ಟಿದ್ದ ₹1,480 ನಗದು, 17 ಜೀವಂತ ಹುಂಜಗಳು ಹಾಗೂ ಕೋಳಿ ಅಂಕಕ್ಕೆ ಬಳಸುತ್ತಿದ್ದ ಎರಡು ಬಾಳ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 30/2026 ಅಡಿ BNS ಕಲಂ 189(2), 193 ಹಾಗೂ 190 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87, 93 ಜೊತೆಗೆ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960ರ ಕಲಂ 11(1)(ಟಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Post a Comment