ಮಂಗಳೂರು: ದೇವಸ್ಥಾನಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟ ಯುವಕನೊಬ್ಬ ಮನೆಗೆ ಮರಳದೇ ಕಾಣೆಯಾಗಿರುವ ಘಟನೆ ಮಂಗಳೂರು ಸಮೀಪದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಕೊಣಾಜೆ ಗ್ರಾಮದ ಮುಚ್ಚಿಲಕೋಡಿ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿವೇಕ್ ಶೆಟ್ಟಿಗಾರ್ ಅವರು ಮಂಗಳೂರಿನ ಕದ್ರಿ ಸಮೀಪದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ವಾಪಸ್ ಬರುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಮಾರ್ಚ್ 9ರಂದು ಎಂದಿನಂತೆ ಕೆಲಸಕ್ಕೆ ತೆರಳಿದ ಅವರು ರಾತ್ರಿ ಸುಮಾರು 9.30 ಗಂಟೆಗೆ ತಾಯಿಗೆ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹಾಗೂ ಮನೆಗೆ ಬರಲು ತಡವಾಗಬಹುದು ಎಂದು ತಿಳಿಸಿದ್ದರು.
ಆ ಬಳಿಕ ರಾತ್ರಿ 12 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಕುಟುಂಬಸ್ಥರು ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಮಾರ್ಚ್ 10ರಂದು ಸಹ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದರೂ ಅವರ ಮೊಬೈಲ್ ಸಂಪರ್ಕವಾಗಿಲ್ಲ. ಬಳಿಕ ಅವರು ಕೆಲಸ ಮಾಡುವ ಸಂಸ್ಥೆಗೆ ಕರೆ ಮಾಡಿ ವಿಚಾರಿಸಿದಾಗ ಆ ದಿನ ಕಂಪೆನಿ ಬಂದ್ ಆಗಿರುವುದಾಗಿ ತಿಳಿದುಬಂದಿದೆ.
ಕುಟುಂಬಸ್ಥರು ಹಾಗೂ ಬಂಧುಮಿತ್ರರ ಬಳಿ ವಿಚಾರಿಸಿ ಎಲ್ಲೆಡೆ ಹುಡುಕಾಟ ನಡೆಸಿದರೂ ಈವರೆಗೆ ವಿವೇಕ್ ಶೆಟ್ಟಿಗಾರ್ ಅವರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 21/2026ರಡಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿವರಗಳು:
ಕಾಣೆಯಾದ ವಿವೇಕ್ ಶೆಟ್ಟಿಗಾರ್ ಅವರು ಸುಮಾರು 5.7 ಅಡಿ ಎತ್ತರ ಹೊಂದಿದ್ದು, ಸದೃಢ ಶರೀರ, ದುಂಡು ಮುಖ, ಎಣ್ಣೆಗಂಪು ಮೈಬಣ್ಣ ಹೊಂದಿದ್ದಾರೆ. ಗಡ್ಡ ಬಿಟ್ಟಿರುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಚುಕ್ಕೆಗಳಿರುವ ಉದ್ದ ತೋಳಿನ ಶರ್ಟ್ ಧರಿಸಿದ್ದರು. ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ
Post a Comment