Top News

ಮಂಗಳೂರು ವಿವಿ 44ನೇ ಘಟಿಕೋತ್ಸವ: ಹರೇಕಳ ಹಾಜಬ್ಬ ಸೇರಿದಂತೆ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್

ಮಂಗಳೂರು: ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ತಿಳಿಸಿದ್ದಾರೆ.

​ವಿಶ್ವವಿದ್ಯಾನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸೇವೆ, ಜನಪದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಮೂವರು ಸಾಧಕರು ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದರು. ವಿಶೇಷವಾಗಿ, ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ದೈವ ನರ್ತನ ಕ್ಷೇತ್ರಕ್ಕೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.
​ಯಕ್ಷಗಾನದ ಹಿರಿಯ ಕೊಂಡಿ ಕೆ. ಗೋವಿಂದ ಭಟ್ ಅವರಿಗೆ ಏಪ್ರಿಲ್ 13ರಂದು ಅವರ ನಿವಾಸದಲ್ಲೇ ಪದವಿ ಪ್ರದಾನ ಮಾಡಲಾಗುವುದು. 

ಉಳಿದಂತೆ ಹರೇಕಳ ಹಾಜಬ್ಬ ಹಾಗೂ ರವೀಶ್ ಪಡುಮಲೆ ಅವರಿಗೆ ಶನಿವಾರ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಗೌರವ ಪದವಿ ನೀಡಲಾಗುವುದು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಸಂಸದ ಬ್ರಿಜೇಶ್ ಚೌಟ ಉಪಸ್ಥಿತರಿರಲಿದ್ದಾರೆ.

​ಈ ಬಾರಿಯ ಶೈಕ್ಷಣಿಕ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ ಕುಲಪತಿಗಳು, ಒಟ್ಟು ಶೇ. 88.74 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು. ಸ್ನಾತಕ ವಿಭಾಗದಲ್ಲಿ ಶೇ. 87.87 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ. 93.86 ರಷ್ಟು ಫಲಿತಾಂಶ ದಾಖಲಾಗಿದೆ. ಸಮಾರಂಭದಲ್ಲಿ 162 ಮಂದಿಗೆ ಪಿಹೆಚ್‌ಡಿ, 56 ಚಿನ್ನದ ಪದಕ ಹಾಗೂ 56 ನಗದು ಬಹುಮಾನಗಳನ್ನು ವಿತರಿಸಲಾಗುವುದು. ಈ ಬಾರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ರ‍್ಯಾಂಕ್‌ಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

Post a Comment

Previous Post Next Post