ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ಗುರುವಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಸೆ.25ರಂದು ನಗರದ ಹೊಟೇಲ್ ಸೀ ವ್ಯೂ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶೈಕ್ಷಣಿಕ ಕ್ಷೇತ್ರಕ್ಕೆ ಸುದೀರ್ಘ ಹಾಗೂ ಅನುಪಮ ಸೇವೆ ಸಲ್ಲಿಸಿದ ಕೆಎಂಸಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಗುರುದತ್ ಕಾಮತ್, ಕರಂಬಾರು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ್ ಶೆಟ್ಟಿ, ಸಂತ ಅಲೋಶಿಯಸ್ ಶಾಲೆಯ ಶಿಕ್ಷಕ ಪ್ರವೀಣ್ ಕುಟಿನ್ಹೊ ಹಾಗೂ ಕೇರಳ ಸಮಾಜಂ ಶಾಲೆಯ ನಿವೃತ್ತ ಶಿಕ್ಷಕಿ ಸುಭದ್ರಾ ಶೇಟ್ ಅವರನ್ನು ಗುರುವಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಮಾಜಸೇವಾ ಯೋಜನೆಯ ಅಂಗವಾಗಿ ವಾಮಂಜೂರು ನಿವಾಸಿ, ಸೌಂದರ್ಯ ತಜ್ಞೆ ಸುಪ್ರೀತಾ ಅವರಿಗೆ ಸ್ವಯಂ ಉದ್ಯೋಗಕ್ಕಾಗಿ ಸೌಂದರ್ಯ ಮಳಿಗೆ ಆರಂಭಿಸಲು ₹15,000 ಆರ್ಥಿಕ ನೆರವನ್ನು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಹಸ್ತಾಂತರಿಸಿದರು. ಈ ನೆರವನ್ನು ಸಂಸ್ಥೆಯ ಸದಸ್ಯ ಎಂ.ವಿ. ಮಲ್ಯ ಪ್ರಾಯೋಜಿಸಿದ್ದರು.
ಬಳಿಕ ಡಾ. ದೇವದಾಸ್ ರೈ ಅವರ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ ‘ಸೆಂಟೋರ್’ ಅನ್ನು ಸಂಸ್ಥೆಯ ಹಿರಿಯ ಸದಸ್ಯ ಶ್ರೀನಿವಾಸ್ ಶೆಟ್ಟಿ ಬಿಡುಗಡೆಗೊಳಿಸಿದರು. ಅಲ್ಲದೆ, ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2, 3 ಹಾಗೂ 4ರಂದು ನಗರದ ಕುಲಶೇಖರದಲ್ಲಿರುವ ಕೋರ್ಡೆಲ್ ಚರ್ಚ್ ಪ್ರಾಂಗಣದಲ್ಲಿ ನಡೆಯಲಿರುವ **‘ಕೃಷಿ ಹಬ್ಬ’**ದ ಬಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.
ಅಧ್ಯಕ್ಷ ಬಿ.ಎನ್. ರವೀಂದ್ರ ಸ್ವಾಗತಿಸಿ, ಶಿಕ್ಷಕರ ವೃತ್ತಿ ಗೌರವಾನ್ವಿತವಾಗಿದ್ದು, ಸಮಾಜದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ ಎಂದರು. ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ಸಂಸ್ಥೆಯ ವರದಿ ಮಂಡಿಸಿದರು. ಶೆಲ್ಡನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ರವಿ ಜಲನ್ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಭಾಸ್ಕರ ರೈ ಉಪಸ್ಥಿತರಿದ್ದರು.
Post a Comment