ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಕುಡ್ಲದ ಪಿಲಿಪರ್ಬ-2026ರ ಐದನೇ ಆವೃತ್ತಿ ಮುಕ್ತಾಯಗೊಂಡಿದೆ. 11 ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡ ಪ್ರತಿಷ್ಠಿತ ಪಿಲಿಪರ್ಬ-2026ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ತಂಡ ದ್ವಿತೀಯ ಸ್ಥಾನ ಪಡೆದರೆ, ದಿ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್ ಪೊಳಲಿ ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಜಂಟಿಯಾಗಿ ತೃತೀಯ ಸ್ಥಾನವನ್ನು ಪಡೆದುಕೊಂಡವು.
ವಿಶೇಷ ಪ್ರಶಸ್ತಿಗಳ ವಿವರ :
ಪಿಲಿಪರ್ಬದ ವಿಶೇಷ ಪ್ರಶಸ್ತಿಗಳ ಪೈಕಿ 'ಕಪ್ಪು ಪಿಲಿ' ಪ್ರಶಸ್ತಿಯನ್ನು ಟ್ಯಾಲೆಂಟ್ ಟೈಗರ್ಸ್ MYB ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು ತಂಡ ಪಡೆದುಕೊಂಡಿತು. 'ಮರಿ ಹುಲಿ' ಪ್ರಶಸ್ತಿಯನ್ನು ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಜಂಟಿಯಾಗಿ ತಮ್ಮದಾಗಿಸಿಕೊಂಡವು. ಬಹುನಿರೀಕ್ಷಿತ 'ಪರ್ಬದ ಪಿಲಿ' ಪ್ರಶಸ್ತಿಯನ್ನು ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ ತಂಡ ಗೆದ್ದುಕೊಂಡಿತು.
ಶಿಸ್ತಿನ ತಂಡ ಪ್ರಶಸ್ತಿಯನ್ನು ಪಾಂಡೇಶ್ವರ ಶಾರದಾ ಹುಲಿ ತಂಡ ಪಡೆದುಕೊಂಡಿತು. ತಾಸೆ ಹಿಮ್ಮೇಳ ವಿಭಾಗದಲ್ಲಿ ಪೊಳಲಿ ಟೈಗರ್ಸ್ ಪ್ರಶಸ್ತಿ ಗೆದ್ದರೆ, ಬಣ್ಣಗಾರಿಕೆ ಹಾಗೂ ಮುಡಿ ವಿಭಾಗದಲ್ಲಿ ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ ತಂಡ ಪ್ರಶಸ್ತಿ ಪಡೆಯಿತು. ಮೆರವಣಿಗೆ ಹಾಗೂ ಧರಣಿ ಮಂಡಲ ವಿಭಾಗದ ಪ್ರಶಸ್ತಿಗಳನ್ನು ಹನುಮಾನ್ ಟೈಗರ್ಸ್ ಉಪ್ಪಳ ತಂಡ ತನ್ನದಾಗಿಸಿಕೊಂಡಿತು.
ಗಣ್ಯರ ಉಪಸ್ಥಿತಿ
ಸಮಾರೋಪ ಸಮಾರಂಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಶಾಸಕರಾದ ಡಾ. ಭರತ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು.
ಚಲನಚಿತ್ರ ತಾರೆಯರಾದ ಶೈನ್ ಶೆಟ್ಟಿ, ಅರ್ಜುನ್ ದೇವ್, ತನ್ವಿ ರಾಮ್ ಹಾಗೂ ರೂಪಶ್ರೀ ವರ್ಕಾಡಿ ಸೇರಿದಂತೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ ಹಾಗೂ ನರೇಶ್ ಪ್ರಭು ಮತ್ತಿತರರು ಭಾಗವಹಿಸಿದ್ದರು.
ಐದನೇ ಆವೃತ್ತಿಯ ಪಿಲಿಪರ್ಬದಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹ ಧನ ನೀಡಿ ಗೌರವಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕರಾವಳಿಯ ಹುಲಿವೇಷದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಈ ಸ್ಪರ್ಧಾಕೂಟ ಸಾವಿರಾರು ಜನರ ಗಮನ ಸೆಳೆಯಿತು.
Post a Comment