ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ ; ಮತ್ತೊಮ್ಮೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ |ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ತನಿಖೆಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ

ಮಂಗಳೂರು: 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎನ್‌. ಶಶಿಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ.

ಸರ್ಕಾರ ಹೊರಡಿಸಿರುವ ಆದೇಶದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರಿನ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್, ಬೆಂಗಳೂರಿನ ಸಿಐಡಿ ಎಸ್‌ಪಿ ಲೋಕೇಶ್ ಜಗಲಾಸರ್ ಹಾಗೂ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೌಜನ್ಯ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಸೂಚಿಸಿದ್ದ ಸುಪ್ರೀಂಕೋರ್ಟ್, ಎಸ್‌ಐಟಿ ರಚಿಸಿ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳದ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.

ಈ ಪ್ರಕರಣದಲ್ಲಿ ಸಿಐಡಿ ಹಾಗೂ ಸಿಬಿಐ ತನಿಖೆ ನಡೆಸಿದ್ದರೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಪ್ರಕರಣದ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಸುಮಾರು ಆರು ವರ್ಷಗಳ ಕಾಲ ಜೈಲಿನಲ್ಲಿದ್ದು, 2023ರ ಜೂನ್‌ನಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು.

ಮಗಳ ಪ್ರಕರಣದ ಮರುತನಿಖೆಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಸೌಜನ್ಯ ತಾಯಿ ಕುಸುಮಾವತಿ, 2024ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬಳಿಕ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಆರಂಭದಲ್ಲಿ ಮರುತನಿಖೆಗೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ, ಬಳಿಕ ತನ್ನ ನಿಲುವು ಬದಲಿಸಿಕೊಂಡು ಹೊಸ ತನಿಖೆಗೆ ಎಸ್‌ಐಟಿ ರಚಿಸಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಇದೀಗ ಎಸ್‌ಐಟಿ ರಚನೆಯೊಂದಿಗೆ ಸುಮಾರು 14 ವರ್ಷಗಳಷ್ಟು ಹಳೆಯ ಪ್ರಕರಣದ ತನಿಖೆ ಮತ್ತೆ ಆರಂಭವಾಗಲಿದೆ.

Post a Comment

Previous Post Next Post