ಮಂಗಳೂರು : ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಂಗಳೂರು ನಗರ ಪೊಲೀಸರು, ಸುಮಾರು ₹82 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸಿದರು.
ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ Ramky Energy and Environment Ltd. ಸಂಸ್ಥೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಮಂಗಳೂರು ನಗರ ವ್ಯಾಪ್ತಿಯ 16 ಪೊಲೀಸ್ ಠಾಣೆಗಳ 59 ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು ಡ್ರಗ್ ಡಿಸ್ಪೋಸಲ್ ಸಮಿತಿಯ ಸಮ್ಮುಖದಲ್ಲಿ ಸುಟ್ಟು ವಿಲೇವಾರಿ ಮಾಡಲಾಯಿತು.
ನಾಶಪಡಿಸಿದ ವಸ್ತುಗಳಲ್ಲಿ 450 ಕೆಜಿ ಗಾಂಜಾ, 43 ಕೆಜಿ 260 ಗ್ರಾಂ ಎಂಡಿಎಂಎ, 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆಜಿ 200 ಗ್ರಾಂ ಭಾಂಗ್ ಸೇರಿವೆ.
ಇವುಗಳಲ್ಲಿ 2024ರಲ್ಲಿ ಮಂಗಳೂರು ಪೂರ್ವ ಠಾಣೆಯಲ್ಲಿ ವಶಪಡಿಸಿಕೊಂಡಿದ್ದ ಸುಮಾರು ₹75 ಕೋಟಿ ಮೌಲ್ಯದ 37 ಕೆಜಿ ಎಂಡಿಎಂಎ ಪ್ರಮುಖವಾಗಿದೆ.
2026ರಲ್ಲಿ ಇದುವರೆಗೆ ಮಂಗಳೂರು ನಗರ ಪೊಲೀಸರು 87 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮಾದಕ ವಸ್ತುಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು 112 ಅಥವಾ 9480802321 ಸಂಖ್ಯೆಗೆ ಕರೆ ಮಾಡುವಂತೆ, ಅಥವಾ ಪೊಲೀಸ್ ಇಲಾಖೆಯ ಕ್ಯೂಆರ್ ಕೋಡ್ ಮೂಲಕ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Post a Comment