ಮಂಗಳೂರು, ಜೂನ್ 17: ಜಪ್ಪಿನಮೊಗರು ಕಡೆಕಾರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಪುನರ್‌ನಿರ್ಮಾಣ ಕಾರ್ಯಕ್ಕೆ ಬುಧವಾರ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ವೈದಿಕ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಒಂದು ಕಾಲದಲ್ಲಿ ಹಿಂದುಳಿದ ಗ್ರಾಮವಾಗಿದ್ದ ಈ ಪ್ರದೇಶ ಇಂದು ಸಮೃದ್ಧಿಯತ್ತ ಸಾಗಿರುವುದು ದೇವರ ಅನುಗ್ರಹದಿಂದ ಸಾಧ್ಯವಾಗಿದೆ. ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಯಿಂದ ದೇವಸ್ಥಾನದ ಪುನರ್‌ನಿರ್ಮಾಣದ ಅವಕಾಶ ದೊರೆತಿದ್ದು, ಈ ಕಾರ್ಯದಲ್ಲಿ ಎಲ್ಲರೂ ಶಕಪುರುಷರಾಗಿ ಇತಿಹಾಸ ನಿರ್ಮಿಸಬೇಕು ಎಂದು ಕರೆ ನೀಡಿದರು.
ದೇವಸ್ಥಾನದ ಸೇವೆಯಲ್ಲಿ ತೊಡಗಿದವರು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ನಮಗೆ ದೊರೆತಿರುವ ಸೇವಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ದೇವಸ್ಥಾನದ ಪುನರ್‌ನಿರ್ಮಾಣಕ್ಕಾಗಿ ಮಾಣಿಲ ಕ್ಷೇತ್ರದಿಂದ ₹1 ಲಕ್ಷ ದೇಣಿಗೆ ನೀಡುವುದಾಗಿ ಹಾಗೂ ಕರಸೇವೆಗೆ ಸ್ವಯಂಸೇವಕರನ್ನು ಕಳುಹಿಸಲು ಸಿದ್ಧರಿರುವುದಾಗಿ ಸ್ವಾಮೀಜಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಹಾಗೂ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾತನಾಡಿ, ಹಿಂದೆ ಈ ಪ್ರದೇಶಕ್ಕೆ ನಡೆದುಕೊಂಡು ಬರುವುದೇ ಕಷ್ಟವಾಗಿತ್ತು. ಆದರೆ ಇಂದು ಉತ್ತಮ ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಪ್ರದೇಶದ ಚಿತ್ರಣವೇ ಬದಲಾಗಿದೆ. ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯವನ್ನು ಮುಂದಿನ 10 ತಿಂಗಳೊಳಗೆ ಪೂರ್ಣಗೊಳಿಸಿ, 2027ರ ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಜೆ. ಮಾತನಾಡಿ, ನೇತ್ರಾವತಿ ನದಿ ತೀರದ ಪ್ರಶಾಂತ ವಾತಾವರಣದಲ್ಲಿರುವ ಜಪ್ಪಿನಮೊಗರು ಗ್ರಾಮದ ಕಡೆಕಾರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರವು ಸುಮಾರು 680 ವರ್ಷಗಳ ಇತಿಹಾಸ ಹೊಂದಿದೆ. ಶ್ರೀ ಗುರು ಶಾಂತಯ್ಯ ಸ್ವಾಮಿಯವರಿಂದ ಪ್ರತಿಷ್ಠಾಪಿತವಾದ ಈ ಪುಣ್ಯಕ್ಷೇತ್ರವನ್ನು ಐದು ಅಡಿ ಎತ್ತರಿಸಿ ನೂತನವಾಗಿ ನಿರ್ಮಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ವೀಣಾಮಂಗಳ, ಕ್ಷೇತ್ರದ ಆಡಳಿತ ಮೋಕ್ತೆಸರ ಶಿವಾನಂದ ರಾವ್, ಜೆ. ಜಗದೀಶ್ ರಾವ್, ಜೆ. ಕೊರಗಪ್ಪ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಟ್ರಸ್ಟಿಗಳಾದ ನವೀನ್‌ಚಂದ್ರ, ಸುಧೀರ್, ಕೋಶಾಧಿಕಾರಿ ಸಂತೋಷ್, ಪ್ರದೀಪ್ ಪಾಲೆಮಾರ್ ಹಾಗೂ ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದರು.
ಯೋಗೀಶ್ ಶೆಟ್ಟಿ ಜೆಪ್ಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಉಪಾಧ್ಯಕ್ಷ ಜೆ.ಕೆ. ರಾವ್ ವಂದಿಸಿದರು.