ಮಂಗಳೂರು : ಭಾರತೀಯ ವೈದ್ಯಕೀಯ ಸಂಘದಲ್ಲಿ ದಿ.ಡಾ.ಎಂ.ಸುಧಾಕರ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ

ಮಂಗಳೂರು : ನಗರದ ಭಾರತೀಯ ವೈದ್ಯಕೀಯ ಸಂಘ ಮತ್ತು ಕೆನರಾ ಮೂಳೆ ಶಾಸ್ತ್ರ ತಜ್ಞರ ಸಂಘದ ಜಂಟಿ ಆಶ್ರಯದಲ್ಲಿ ಮಾನವೀಯ ಮೌಲ್ಯದ ಜೊತೆಗೆ ಅನುಪಮ ವೈದ್ಯಕೀಯ ಸೇವೆ ಸಲ್ಲಿಸಿ ನೂರಾರು ಪದವಿ ಪೂರ್ವ ಮತ್ತು ಸ್ನಾತಕೋತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ಶಿಕ್ಷಣ, ತರಬೇತಿ ಮಾರ್ಗದರ್ಶನ ನೀಡಿದ ನಗರದ ಖ್ಯಾತ ಹಿರಿಯ ಗುರು ಕೀಲು, ಮೂಳೆ ಶಾಸ್ತ್ರ ತಜ್ಞ ಡಾ। (ಪ್ರೋ) ಎಂ. ಸುಧಾಕರ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಗರದ ಐ.ಎಂ.ಎ. ಡಾ.ಎ.ವಿ. ರಾವ್ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ನೇತೃತ್ವದಲ್ಲಿ ಜರುಗಿತು.

ನಗರದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂದೀಪ್ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದಿ.ಡಾ.ಎಂ. ಸುಧಾಕರ ಶೆಟ್ಟಿಯವರೊಂದಿಗೆ ಆತ್ಮೀಯ ಸಂಬಂಧ, ಒಡನಾಟವನ್ನು ಸ್ಮರಿಸಿ ಅವರ ವಿಶೇಷ ಸೇವಾ ಮನೋಭಾವ ಗೌರವಾನ್ವಿತ ವ್ಯಕ್ತಿತ್ವ ಕರ್ತವ್ಯ ನಿಷ್ಠೆ ಸಮಯ ಪ್ರಜ್ಞೆ, ಶಿಸ್ತು ಬದ್ದತೆ, ವಿದ್ಯಾರ್ಥಿಗಳಿಗೆ ಧಾರೆ ಎರೆದ ಮೌಲ್ಯಧಾರಿತ ಶಿಕ್ಷಣದ ಮೂಲಕ ರೋಗಿಗಳ ಮತ್ತು ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದು ನುಡಿದು ಅವರ ವ್ಯಕ್ತಿತ್ವ ಯುವ ವೈದ್ಯರಿಗೆ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ವೈದಕೀಯ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಕಾಮತ್‌ ದಿ.ಡಾ.ಶೆಟ್ಟಿಯವರು ಸಲ್ಲಿಸಿದ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸುಧೀರ್ಘ ವೈದ್ಯಕೀಯ ಮತ್ತು ಶೈಕ್ಷಣಿಕ ಸೇವೆ ಮತ್ತು ಸಾಧನೆ ಮತ್ತು ಪಡೆದ ಪ್ರಶಸ್ತಿಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ರಾಜೇಶ್ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಇತ್ತೀಚಿಗಿನ ಬೆಳವಣಿಗೆ" ಬಗ್ಗೆ ದತ್ತಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷರಾದ ಸದಾನಂದ ಪೂಜಾರಿಯವರು ಸ್ವಾಗತಿಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಡಾ.ಜುಲಿಯಾನ ಸಲ್ದಾನ. ಕೆನರಾ ಮೂಳೆ ತಜ್ಞರ ಸಂಘದ ಉಪಾಧ್ಯಕ್ಷ ಡಾ.ವಿಕ್ರಂ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಚುನಾಯಿತ ಅಧ್ಯಕ್ಷರಾದ ಉಲ್ಲಾಸ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.
Previous Post Next Post