ಪುತ್ತೂರು : ತನ್ನ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ ನಂತರ ಮಗುವಿನೊಂದಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಆರೋಪಿಯು ತನ್ನ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಲು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನರ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ನ್ಯಾಯಾಲಯವು ಪ್ರಮುಖ ಷರತ್ತಾಗಿ ಸಂತ್ರಸ್ತೆ ಮತ್ತು ಮಗುವಿನ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು ₹75 ಸಾವಿರ ಪಾವತಿಸಬೇಕು ಎಂದು ಸೂಚಿಸಿದೆ. ಈ ಮೊತ್ತವನ್ನು ಆರೋಪಿ ಸ್ವತಃ ಅಥವಾ ತನ್ನ ಪೋಷಕರ ಮೂಲಕ ಪಾವತಿಸಬೇಕಾಗಿದೆ.
ಇದಲ್ಲದೆ, ಮೊದಲ ಕಂತಿನಾಗಿ ಒಂದು ವಾರದ ಒಳಗೆ ₹75 ಸಾವಿರವನ್ನು ಪಾವತಿಸಿ, ನಂತರ ಪ್ರತಿ ತಿಂಗಳು ನಿಯಮಿತವಾಗಿ ಹಣ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಈ ಷರತ್ತಿನ ಆಧಾರದಲ್ಲಿ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಇದೇ ವೇಳೆ, ಸಂತ್ರಸ್ತೆಯ ಪೋಷಕರು ಮತ್ತು ಸಂಬಂಧಿಕರು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
Tags
ಪುತ್ತೂರು