ಪಣಂಬೂರು ಸುಲಿಗೆ ಪ್ರಕರಣ: ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಬಂಧನ, ₹32,500 ಮೌಲ್ಯದ ಸೊತ್ತು ವಶ

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ಸಮೀಪ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ, ಕಳವುಗೊಳಿಸಿದ್ದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದಿನಾಂಕ 13 ಏಪ್ರಿಲ್ 2026ರಂದು ಸೋಮವಾರಪೇಟೆಯ ಅಜಯ್ ಕೆ (29) ಅವರು ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಜೊತೆಗೆ ಹುಟ್ಟುಹಬ್ಬ ಆಚರಿಸಲು ತಣ್ಣೀರುಬಾವಿ ಬೀಚ್ ಕಡೆ ಕಾರಿನಲ್ಲಿ ತೆರಳಿದ್ದರು. 

ಬೆಳಗಿನ ಜಾವ ಸುಮಾರು 2.30ರ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ಹೋಗುತ್ತಿದ್ದ ವೇಳೆ ಇಬ್ಬರು ಯುವಕರನ್ನು ಕೇಳಲು ಕಾರು ನಿಲ್ಲಿಸಿದರು. ವಿಳಾಸ ತೋರಿಸುವುದಾಗಿ ಹೇಳಿದ ಆರೋಪಿಗಳು ಕಾರಿನಲ್ಲಿ ಹಿಂಬದಿಗೆ ಕುಳಿತು, ಸ್ವಲ್ಪ ದೂರ ಹೋಗಿ ಸ್ಕ್ರೂಡ್ರೈವರ್ ತೋರಿಸಿ ಬೆದರಿಸಿ ಸುಲಿಗೆ ನಡೆಸಿದ್ದಾರೆ.

ಆರೋಪಿಗಳು ಟೈಟಾನ್ ವಾಚ್ (₹9,000), ಫಾಸ್ಟ್‌ಟ್ರಾಕ್ ವಾಚ್ (₹3,000), ನಗದು ₹2,000, ಕ್ಯಾಮೆರಾ ಗಿಂಬಲ್ (₹8,000), ಪವರ್ ಬ್ಯಾಂಕ್ (₹2,000) ಹಾಗೂ ರೋಲ್ಡ್ ಗೋಲ್ಡ್ ಬ್ರೇಸ್ಲೆಟ್ (₹500) ಸೇರಿದಂತೆ ಒಟ್ಟು ₹24,500 ಮೌಲ್ಯದ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ. 

ಜೊತೆಗೆ ಕಾರಿನ ಗ್ಲಾಸ್ ಹಾನಿಗೊಳಪಡಿಸಿ ₹8,000 ನಷ್ಟ ಉಂಟುಮಾಡಿದ್ದಾರೆ. ಒಟ್ಟು ನಷ್ಟ ₹32,500 ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಿಎಸ್‌ಐ ಶ್ರೀಕಲಾ ಕೆ.ಟಿ, ಜ್ಞಾನಶೇಖರ್ ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಏಪ್ರಿಲ್ 13ರಂದು ಆರೋಪಿಗಳಾದ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22) ಅವರನ್ನು ಬಂಧಿಸಿ ಗಿಂಬಲ್, ಟೈಟಾನ್ ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕ್ರೂಡ್ರೈವರ್ ವಶಕ್ಕೆ ಪಡೆದಿದ್ದರು.

ಇದೀಗ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಚಂದು ಹಾರೀಸ್ (33) ಅವರನ್ನು ಏಪ್ರಿಲ್ 22ರಂದು ಬಂಧಿಸಿ, ಉಳಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ವಶಕ್ಕೆ ಪಡೆಯಲಾಗಿದೆ.
ಚಂದು ಹಾರೀಸ್ ವಿರುದ್ಧ ಈಗಾಗಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದಾನೆ. ಅವನ ವಿರುದ್ಧ ಮೂರು ಹಳೆಯ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್‌ಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Previous Post Next Post